ಹಾಸನ : ಫೆಬ್ರವರಿ 5, 2026 : ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾದ ಹಿನ್ನೆಲೆಯಲ್ಲಿ ರೈತನೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿಯ ಕೊತ್ತನಘಟ್ಟ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಯೋಗೇಶ್ (50) ಎಂದು ಗುರುತಿಸಲಾಗಿದ್ದು, ಅವರು ಚನ್ನರಾಯಪಟ್ಟಣದ ಶ್ರೀರಾಮ ಫೈನಾನ್ಸ್ ಸಂಸ್ಥೆಯಲ್ಲಿ ಸುಮಾರು ₹7 ಲಕ್ಷ ಸಾಲ ಪಡೆದಿದ್ದರು. ಕುಟುಂಬಸ್ಥರ ಹೇಳಿಕೆಯಂತೆ, ಯೋಗೇಶ್ ಅವರು ಪ್ರತಿಮಾಸವೂ ನಿಯಮಿತವಾಗಿ ಕಂತುಗಳನ್ನು ಪಾವತಿಸುತ್ತಿದ್ದರು. ಆದರೆ ಇತ್ತೀಚಿನ ಎರಡು ತಿಂಗಳುಗಳ ಕಂತು ಬಾಕಿ ಉಳಿದಿತ್ತು ಎನ್ನಲಾಗಿದೆ.
ನಿನ್ನೆ ರಾತ್ರಿ ಶ್ರೀರಾಮ ಫೈನಾನ್ಸ್ನ ಇಬ್ಬರು ಸಿಬ್ಬಂದಿ ಯೋಗೇಶ್ ಅವರ ಮನೆಗೆ ತೆರಳಿ ಗಲಾಟೆ ನಡೆಸಿ, ಮನೆ ಸೀಜ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಮಾನಸಿಕವಾಗಿ ಕುಗ್ಗಿದ ಯೋಗೇಶ್ ಅವರು ರಾತ್ರಿ ವೇಳೆ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ಫೈನಾನ್ಸ್ ಸಂಸ್ಥೆಯ ವಿರುದ್ಧ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಾಹಿತಿ ಪಡೆದ ಶ್ರವಣಬೆಳಗೊಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆ ಶ್ರವಣಬೆಳಗೊಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.










