ಹಾಸನ : 60 ವರ್ಷಗಳಿಂದ ಉಳುಮೆ ಮಾಡುತ್ತಿರುವ 47 ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ಮಾಡಲು ಆಗ್ರಹ ,ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ–ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ

ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ–ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ

ಹಾಸನ : ಫೆಬ್ರವರಿ 4, 2026 : ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿಯ ಕಾರೆಕೆರೆ ಕಾವಲು ಗ್ರಾಮದಲ್ಲಿ ಕಳೆದ 60 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿರುವ 47 ಭೂಹೀನ ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ದಲಿತ ಹಕ್ಕುಗಳ ಸಮಿತಿ – ಕರ್ನಾಟಕ (ಡಿಹೆಚ್‌ಎಸ್) ಹಾಸನ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

1966ರಲ್ಲಿ ಕಾರೆಕೆರೆ ಕಾವಲು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 246 ಎಕರೆ ಭೂಮಿಯನ್ನು 30 ದಲಿತ ಕುಟುಂಬಗಳಿಗೆ ಮಂಜೂರು ಮಾಡಲಾಗಿತ್ತು. ಆದರೆ ಈ ಪೈಕಿ ಕೇವಲ 10 ಕುಟುಂಬಗಳು ಮಾತ್ರ ಗ್ರಾಮದಲ್ಲಿ ವಾಸವಿದ್ದು ಭೂಮಿಯನ್ನು ಸ್ವಾಧೀನಾನುಭವದಲ್ಲಿ ಉಳುಮೆ ಮಾಡಿಕೊಂಡು ಬಂದಿವೆ. ಉಳಿದ 20 ಕುಟುಂಬಗಳು ಗ್ರಾಮದಲ್ಲೇ ವಾಸವಿಲ್ಲದೆ, ಈ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ಕೃಷಿ ಮಾಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದೇ ಪ್ರದೇಶದಲ್ಲಿ ಕಳೆದ ಆರು ದಶಕಗಳಿಂದ 47 ಭೂಹೀನ ದಲಿತ ಕುಟುಂಬಗಳು ನಿರಂತರವಾಗಿ ಭೂಮಿಯನ್ನು ಉಳುಮೆ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಾ ಬದುಕು ಸಾಗಿಸುತ್ತಿವೆ. ಬೇರೆ ಯಾವುದೇ ಆದಾಯದ ಮೂಲವಿಲ್ಲದೆ ಈ ಭೂಮಿಯನ್ನೇ ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳಿಗೆ ನ್ಯಾಯ ಸಿಗಬೇಕೆಂದು ಸಂಘಟನೆಗಳು ಆಗ್ರಹಿಸಿವೆ.

ಅನುಭವದಲ್ಲಿಲ್ಲದ ಹಾಗೂ ಗ್ರಾಮದಲ್ಲೇ ವಾಸವಿಲ್ಲದವರಿಗೆ ನೀಡಲಾದ ಮೂಲ ದರಕಾಸ್ತು ಮಂಜೂರಾತಿಯನ್ನು ರದ್ದುಗೊಳಿಸಿ, ಹಾಲಿ ಸಾಗುವಳಿ ಮಾಡುತ್ತಿರುವ ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ಮಾಡಬೇಕು ಎಂದು ಈ ಹಿಂದೆ ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ಹಲವು ಬಾರಿ ವೈಯಕ್ತಿಕ ಹಾಗೂ ಸಾಮೂಹಿಕ ಅರ್ಜಿಗಳನ್ನು ಸಲ್ಲಿಸಲಾಗಿದೆ. ಜೊತೆಗೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಅಡಿಯಲ್ಲಿ ಅರ್ಜಿ ನಮೂನೆ 50, 53 ಮತ್ತು 57ಗಳನ್ನು ಕೂಡ ಸಲ್ಲಿಸಲಾಗಿದೆ ಎಂದು ರೈತ ಸಂಘ ತಿಳಿಸಿದೆ.

ಈ ಸಂಬಂಧ 6 ಆಗಸ್ಟ್ 2002ರಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಮೈಸೂರು ವಿಭಾಗೀಯ ಕಚೇರಿಗೆ ದರಕಾಸ್ತು ಮಂಜೂರಾತಿ ರದ್ದತಿ ಕುರಿತು ಪತ್ರ ಬರೆಯಲಾಗಿತ್ತು. ನಂತರ ದಿನಾಂಕ 3 ಸೆಪ್ಟೆಂಬರ್ 2022ರಂದು ವಿಭಾಗೀಯ ಕಚೇರಿಯಿಂದ ಸ್ಪಷ್ಟೀಕರಣ ಕೇಳಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೂ ಇದುವರೆಗೆ ಯಾವುದೇ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಲಿ ಉಳುಮೆ ಮಾಡುತ್ತಿರುವ ದಲಿತರನ್ನು ಭೂಮಿಯಿಂದ ವಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 47 ದಲಿತ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಡಿಹೆಚ್‌ಎಸ್ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಕಾರೆಕೆರೆ ಕಾವಲು ಗ್ರಾಮ ಘಟಕದ ಅಧ್ಯಕ್ಷ ಹೆಚ್. ಸ್ವಾಮಿ, ಕಾರ್ಯದರ್ಶಿ ಪಾಂಡುರಂಗ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ಹಾಗೂ ದಲಿತ ರೈತ ಕುಟುಂಬಗಳು ಪಾಲ್ಗೊಂಡಿದ್ದರು.