ಚನ್ನರಾಯಪಟ್ಟಣ, ಜುಲೈ 06, 2025: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ರಾಜ್ಯ ರಾಜಕೀಯ ಬದಲಾವಣೆಗಳ ಕುರಿತು ಪಟ್ಟಣದಲ್ಲಿ ಮಾತನಾಡಿದ್ದು, “ರಾಜ್ಯ ರಾಜಕೀಯ, ಬದಲಾವಣೆ ಬಗ್ಗೆ ಸೆಪ್ಟೆಂಬರ್ಗೆ ಹೇಳುತ್ತೀನಿ ಅಂತ ಹೇಳಿದ್ದೀನಿ. ಈಗಿನ್ನೂ ಜುಲೈನಲ್ಲಿ ಇದ್ದೇವೆ. ಅದೆಲ್ಲಾ ಈಗ ಹೇಳಿಬಿಟ್ಟರೆ ನಿಮಗೆ ಆಸಕ್ತಿ ಹೋಗುತ್ತೆ. ಇನ್ನೂ ಎರಡು ತಿಂಗಳು ಇದೆ, ದೇಶವನ್ನೇ ತಲೆಕೆಳಗೆ ಮಾಡಬಹುದು ಬನ್ನಿ,” ಎಂದು ಹೇಳಿದರು.
ಸುರ್ಜೆವಾಲಾ ಕಾರ್ಯವೈಖರಿ: ಎಐಸಿಸಿಯಿಂದ ಕರ್ನಾಟಕಕ್ಕೆ ನೇಮಕಗೊಂಡಿರುವ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಕುರಿತು ರಾಜಣ್ಣ, “ಸುರ್ಜೆವಾಲಾ ಮೊದಲನೇ ಸರಿ ಬಂದು ಏನು ಮಾಡಿದ್ರು, ಎರಡನೇ ಸರಿನೂ ಅದನ್ನೆ ಮಾಡೋದು. ಅವರು ನಮ್ಮ ಉಸ್ತುವಾರಿ ಕಾರ್ಯದರ್ಶಿಗಳಿದ್ದಾರೆ. ಎಸಿಸಿಯಿಂದ ಕರ್ನಾಟಕಕ್ಕೆ ನೇಮಕ ಮಾಡಿದ್ದಾರೆ. ನಮ್ಮಲ್ಲಿ ಏನಲ್ಲಾ ಘಟನಾವಳಿಗಳು ನಡೆಯುತ್ತೆ, ಅದನ್ನು ಹತ್ತಿರದಿಂದ ಗಮನಿಸಿ ಕೇಂದ್ರಕ್ಕೆ ವರದಿಯನ್ನು ಕೊಡ್ತಾರೆ. ಆ ಜವಾಬ್ದಾರಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅದರಲ್ಲಿ ವಿಶೇಷತೆ ಏನು, ನಾವು ಹುಡುಕಬಾರದು,” ಎಂದರು.
ಭ್ರಷ್ಟಾಚಾರ ಆರೋಪಗಳ ವಿಚಾರ: ಇಲಾಖೆಗಳಲ್ಲಿ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಶಾಸಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವಾಗ, “ಒಬ್ಬೊಬ್ಬರ ವೈಯಕ್ತಿಕ ಅಭಿಪ್ರಾಯಗಳಿಗೆ ನಾವು ಕಮೆಂಟ್ ಮಾಡಲು ಆಗಲ್ಲ. ನನ್ನ ವೈಯಕ್ತಿಕ ಅಭಿಪ್ರಾಯಗಳು ರಾಜಕಾರಣದಲ್ಲಿ ಬಹಳಷ್ಟು ಇದ್ದಾವೆ. ಅದನ್ನು ಇನ್ನೊಬ್ಬರಿಗೆ ಹೇಳಿ ಎಂದರೆ ಅದು ಅವರಿಗೆ ಸೇರಿದ್ದು. ಅವರ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅದು ಸರಿ ಇರಬಹುದು, ಸರಿ ಇಲ್ಲದಿರಬಹುದು. ಅದನ್ನು ಪಕ್ಷ ಮತ್ತು ಸರ್ಕಾರ ನೋಡಿಕೊಳ್ಳುತ್ತೆ,” ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನದ ಚರ್ಚೆ: ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕೇಳಿದ ಪ್ರಶ್ನೆಗೆ, “ಸಿಎಂ ಸೀಟ್ ಎಲ್ಲಿ ಖಾಲಿ ಇದೆ? ಸಿಎಂ ನಾನೇ ಐದು ವರ್ಷ ಎಂದು ಹೇಳಿದ್ದಾರಲ್ಲಾ, ರಾಜಕಾರಣಕ್ಕೆ ಏಕೆ ತಲೆ ಕಡೆಸಿಕೊಳ್ತೀರಾ? ಜನಗಳಿಗೆ ಒಳ್ಳೆಯದಾಗುವುದಿದ್ದರೆ ಹೇಳಿ,” ಎಂದರು.










