ಹಾಸನ: ಕಾರಿನ ಮೇಲೆ ಒಂಟಿಸಲಗ ಡೆಡ್ಲಿ ಅಟ್ಯಾಕ್; ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಕುಟುಂಬ

ಹಾಸನ/ಬೇಲೂರು (kannadapost.com): ತಾಲೂಕಿನ ದೋಲನಮನೆ ಗ್ರಾಮದಲ್ಲಿ ಮಧ್ಯರಾತ್ರಿ ಒಂಟಿಸಲಗವೊಂದು ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಇಡೀ ಕುಟುಂಬವೊಂದು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮಹಮ್ಮದ್ ಜಾಹಿದ್ ಎಂಬುವವರು ತಮ್ಮ ಕುಟುಂಬದೊಂದಿಗೆ ಮನೆಗೆ ಮರಳಿದ್ದರು. ಮಧ್ಯರಾತ್ರಿ ಮನೆಗೆ ತಲುಪಿ ಕಾರು ಪಾರ್ಕ್ ಮಾಡಲು ಮುಂದಾದ ವೇಳೆ, ಅಲ್ಲೇ ಇದ್ದ ದೈತ್ಯಾಕಾರದ ಕಾಡಾನೆ ಏಕಾಏಕಿ ಕಾರಿನ ಹಿಂಭಾಗದಿಂದ ದಾಳಿ ನಡೆಸಿದೆ.

ಕಾಡಾನೆ ಕಾರಿನ ಮೇಲೆರಗುತ್ತಿದ್ದಂತೆ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಮ್ಮದ್ ಜಾಹಿದ್ ಅವರ ತಾಯಿ, ಅಕ್ಕ ಹಾಗೂ ಮಕ್ಕಳು ಭಯದಿಂದ ಕಿರುಚಾಡಿದ್ದಾರೆ. ಆದರೂ ಒಂಟಿಸಲಗ ಸ್ಥಳದಿಂದ ಕದಲದೆ ಕಾರಿನ ಬಳಿಯೇ ಕೆಲಕಾಲ ನಿಂತಿತ್ತು. ಈ ಆತಂಕದ ಕ್ಷಣದಲ್ಲಿ ಎಚ್ಚೆತ್ತ ಚಾಲಕ ಮಹಮ್ಮದ್ ಜಾಹಿದ್, ಕೂಡಲೇ ಕಾರಿನ ಪಾರ್ಕಿಂಗ್ ಲೈಟ್ ಆನ್ ಮಾಡಿದ್ದಾರೆ. ದಿಢೀರ್ ಬೆಳಕು ಕಂಡ ಕಾಡಾನೆ ಕಾರಿನಿಂದ ಸ್ವಲ್ಪ ದೂರ ಹೋಗಿ ನಿಂತಿದೆ.

ತಕ್ಷಣವೇ ಮಹಮ್ಮದ್ ಜಾಹಿದ್ ಅವರು ಆನೆ ಕಾರ್ಯಪಡೆಗೆ (ETF) ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಇಟಿಎಫ್ ಸಿಬ್ಬಂದಿ, ಪಟಾಕಿ ಸಿಡಿಸುವ ಮೂಲಕ ಕಾಡಾನೆಯನ್ನು ಕಾಡಿನತ್ತ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಡಾನೆ ದಾಳಿಯಿಂದ ‘KA-46 N 1366’ ನಂಬರ್‌ನ ಕ್ರೆಟಾ ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಮಧ್ಯರಾತ್ರಿ ನಡೆದ ಈ ಭೀಕರ ಘಟನೆಯಿಂದ ಮಹಮ್ಮದ್ ಜಾಹಿದ್ ಅವರ ಕುಟುಂಬಸ್ಥರು ತೀವ್ರ ಭಯಭೀತರಾಗಿದ್ದಾರೆ.