Belur|ಬೇಲೂರು (ಹಾಸನ): ಪ್ರೇಮ ವಿವಾಹಕ್ಕೆ ನೆರವಾದ ಎಂಬ ಆರೋಪದ ಮೇಲೆ ಯುವಕನೊಬ್ಬನನ್ನು ಪ್ರೇಮಿಯ ಕಡೆಯವರು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿ ವಾಪಸ್ ತಂದು ಬಿಡುವ ವೇಳೆ ಸ್ಥಳೀಯರು ಹಾಗೂ ಅಪಹೃತನ ಸ್ನೇಹಿತರ ಕೈಗೆ ಸಿಕ್ಕಿಬಿದ್ದು ತೀವ್ರ ಹಲ್ಲೆಗೆ ಗುರಿಯಾಗಿದ್ದಾರೆ. ಮೂರು ಕಾರುಗಳನ್ನು ಪುಂಡರು ಪುಡಿಗಟ್ಟಿದ್ದು, ಜಗಳ ಬಿಡಿಸಲು ಬಂದ ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ಕೆಳಗೆ ಬೀಳಿಸಿದ್ದು ಅವರು ಗಾಯಗೊಂಡ ಘಟನೆ ಬೇಲೂರು ಪಟ್ಟಣದ ಜೆಪಿ ನಗರದಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ:
ಜುಲೈ 1ರಂದು ಬಂಟೇನಹಳ್ಳಿಯ ಸಾನಿಯಾ ಹಾಗೂ ಮುದಿಗೆರೆಯ ಆಸೀಫ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅದೇ ದಿನ ಸಾನಿಯಾ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಈ ಮದುವೆಗೆ ಫ್ರಿಡ್ಜ್ ರಿಪೇರಿ ಕೆಲಸ ಮಾಡುವ ರೋಷನ್ ಕಾರಣ ಎಂಬ ಆರೋಪವಿತ್ತು. ಇದರ ಜೊತೆಗೆ ಜೆಪಿ ನಗರದಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಶಾಹೀಂ ಹಾಗೂ ರೋಷನ್ ನಡುವೆ ಹಳೇ ದ್ವೇಷವೂ ಇತ್ತು.
ಅಪಹರಣ ಮತ್ತು ಹಲ್ಲೆ:
ಇದೇ ದ್ವೇಷದ ಹಿನ್ನೆಲೆಯಲ್ಲಿ, ರೋಷನ್ನನ್ನು ಮಾತನಾಡಬೇಕೆಂದು ಶಾಹೀಂ ಹಾಗೂ ಶಿವಮೊಗ್ಗ, ಮಂಗಳೂರು ಮೂಲದ ಸುಮಾರು 10 ಮಂದಿ ಯುವಕರು ಇನ್ನೋವಾ ಕಾರಿನಲ್ಲಿ ಕರೆದೊಯ್ದಿದ್ದಾರೆ. ನಾಗೇನಹಳ್ಳಿ ಗ್ರಾಮದ ಬಳಿ ಕರೆದೊಯ್ದು ರೋಷನ್ಗೆ ಮನಬಂದಂತೆ ಥಳಿಸಿದ್ದಾರೆ.
ರೊಚ್ಚಿಗೆದ್ದ ಸ್ಥಳೀಯರು, ನಡುಬೀದಿಯಲ್ಲಿ ಮಾರಾಮಾರಿ:
ರೋಷನ್ನನ್ನು ಕಾರಿನಲ್ಲಿ ಕರೆದೊಯ್ಯುತ್ತಿರುವುದನ್ನು ಆತನ ಸ್ನೇಹಿತರು ಗಮನಿಸಿದ್ದರು. ತಕ್ಷಣ ಆತನನ್ನು ಹುಡುಕಿಕೊಂಡು ಹತ್ತಾರು ಮಂದಿ ಕಾರಿನಲ್ಲಿ ಹೊರಟಿದ್ದರು. ರೋಷನ್ ಮೇಲೆ ಹಲ್ಲೆ ನಡೆಸಿ ವಾಪಸ್ ಆತನನ್ನು ಅದೇ ಸ್ಥಳಕ್ಕೆ ಬಿಡಲು ಇನ್ನೋವಾ ಕಾರು ಜೆಪಿ ನಗರಕ್ಕೆ ಬಂದಾಗ ರೊಚ್ಚಿಗೆದ್ದ ರೋಷನ್ ಕಡೆಯವರು ಕಾರನ್ನು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿದ್ದವರನ್ನು ಕೆಳಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಭೀಕರ ಮಾರಾಮಾರಿಯಲ್ಲಿ ಮೂರು ಕಾರುಗಳು ಜಖಂಗೊಂಡಿವೆ.
ಪೊಲೀಸರನ್ನು ತಳ್ಳಿ ಬೀಳಿಸಿದರು:
ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಪುಂಡರು ಜಗಳ ಬಿಡಿಸಲು ಬಂದ ಪೊಲೀಸರನ್ನೇ ಕೆಳಗೆ ತಳ್ಳಿ ಬೀಳಿಸಿದ್ದಾರೆ. ಘಟನೆಯಲ್ಲಿ ಸಿಪಿಐ ರೇವಣ್ಣ ಹಾಗೂ ಎಎಸ್ಐ ಸೋಮಶೇಖರ್ ಗಾಯಗೊಂಡಿದ್ದು, ಇಬ್ಬರ ಮೊಬೈಲ್ ಫೋನ್ಗಳು ಸಂಪೂರ್ಣ ಜಖಂಗೊಂಡಿವೆ.
ಮಾರಾಮಾರಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ರೋಷನ್, ಶಾಹೀಂ, ಮಹಮದ್ ಆಸೀಂ, ಮಹಮದ್ ಆಸೀಫ್, ಶಹಬಾಸ್ ಹಾಗೂ ಇತರರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಚ್ಚಿಬಿದ್ದ ಸಾರ್ವಜನಿಕರು:
ಕಳೆದ ಒಂದು ವಾರದಲ್ಲೇ ಬೇಲೂರು ಪಟ್ಟಣದಲ್ಲಿ ಇಂತಹ ಮೂರು ಗಲಾಟೆ ಪ್ರಕರಣಗಳು ನಡೆದಿವೆ. ಪದೇ ಪದೇ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ಈ ಗಲಭೆಗಳಿಂದ ನಗರವಾಸಿಗಳು ಬೆಚ್ಚಿಬಿದ್ದಿದ್ದು, ಕಿಡಿಗೇಡಿಗಳ ಹಾವಳಿಗೆ ತಕ್ಷಣ ಕಡಿವಾಣ ಹಾಕುವಂತೆ ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.











