Hassan|ಹಾಸನ: ಚಲಿಸುತ್ತಿದ್ದ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ತಾಯಿ ಮತ್ತು ಮಗ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಭೀಕರ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹೊನ್ನೇನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಕುದುರುವಳ್ಳಿ ಗ್ರಾಮದ ನಿವಾಸಿ ಪ್ರಿಯಾಂಕ (28) ಹಾಗೂ ಅವರ ಮಗ ವಿನಿತ್ (7) ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಆಟೋ ಚಾಲಕ ಅಬ್ಬಾಸ್ (52) ಹಾಗೂ ಬಾಲಕ ಸಾಗರ್ (13) ಎಂಬುವವರಿಗೆ ಗಾಯಗಳಾಗಿವೆ.
ಮಗನ ಟಿಸಿ ತರಲು ಹೋಗುತ್ತಿದ್ದಾಗ ದುರಂತ:
ತನ್ನ ಮಗ ವಿನಿತ್ಗೆ ಉಜ್ವಲ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ, ಆತನನ್ನು ಹಾಸನದ ಬೇರೊಂದು ಶಾಲೆಗೆ ಸೇರಿಸಲು ಪ್ರಿಯಾಂಕ ನಿರ್ಧರಿಸಿದ್ದರು. ಇದಕ್ಕಾಗಿ ಹಳೆಯ ಶಾಲೆಯಿಂದ ವರ್ಗಾವಣೆ ಪತ್ರ (ಟಿಸಿ) ತರಲು ಮಗನೊಂದಿಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಅಪಘಾತಕ್ಕೆ ಕಾರಣವೇನು?:
ಆಟೋ ಚಾಲಕ ಅಬ್ಬಾಸ್ ಅತಿ ವೇಗವಾಗಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಆಟೋ ರಸ್ತೆಯಲ್ಲಿ ಪಲ್ಟಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ತಾಯಿ ಪ್ರಿಯಾಂಕ ಮತ್ತು ಮಗ ವಿನಿತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಗಾಯಾಳುಗಳಾದ ಆಟೋ ಚಾಲಕ ಅಬ್ಬಾಸ್ ಹಾಗೂ ಸಾಗರ್ ಅವರನ್ನು ತಕ್ಷಣವೇ ಆಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಆಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಒಂದೇ ಕುಟುಂಬದ ತಾಯಿ ಮತ್ತು ಮಗನ ಅಕಾಲಿಕ ಮರಣದಿಂದ ಕುದುರುವಳ್ಳಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.










