7.5 C
Munich
Home ಜಿಲ್ಲೆ ಹಾಸನ: ನ.16ರಂದು ಮಹಿಳೆಯರಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ

ಹಾಸನ: ನ.16ರಂದು ಮಹಿಳೆಯರಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ

ಹಾಸನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ ಮಹಿಳಾ ಕಲಾ ಸೌರಭ ಕಲಾಸಂಘದ ವತಿಯಿಂದ ಹಾಗೂ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಹಾಗೂ ಎಲ್ಲ ಕಲಾ ಸಂಘಗಳ ಸಹಕಾರದಿಂದ ನ.16 ರಂದು ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಈ ನಾಟಕದ ವಿಶೇಷತೆ ಎಂದರೆ ಎಲ್ಲ ಪೌರಾಣಿಕ ಪಾತ್ರಗಳನ್ನು ಮಹಿಳೆಯೇ ಅಭಿನಯಿಸುತ್ತಿದ್ದು, ಇದು ಜಿಲ್ಲೆಯಲ್ಲೇ ಪ್ರಥಮ ಪ್ರಯತ್ನ ಎಂದು ಜಿಲ್ಲಾ ಕಸಾಪ ಮೌಜಿ ಗೌರವಾಧ್ಯಕ್ಷ ರವಿ ನಾಕಲಗೂಡು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗಮನಾರ್ಹ ಸಂಗತಿ ಎಂದರೆ ಭೀಮ, ಧರ್ಮರಾಯ, ಅರ್ಜುನ, ದುರ್ಯೋಧನ ಮೊದಲಾದ ಗಂಡು ಪಾತ್ರಗಳನ್ನು ಮಹಿಳೆಯರೇ ಕಳೆದ ಹಲವು ತಿಂಗಳಿಂದ ತರಬೇತಿ ಪಡೆದು ಪ್ರದರ್ಶನ ಮಾಡುತ್ತಿದ್ದಾರೆ ಎಂದರು.

ಇದಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಪೌರಾಣಿಕ ನಾಟಕ ಅಭಿನಯಿಸುವವರು, ನೋಡುವವರು ಕಡಿಮೆ ಆಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೆಲಸದ ಒತ್ತಡದ ನಡುವೆಯೂ ಮಹಿಳೆಯರೇ ಒಟ್ಟಾಗಿ ಅದರಲ್ಲೂ ಪೌರಾಣಿಕ ನಾಟಕ ಅಭಿನಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಲಾಸಂಘದ ಅಧ್ಯಕ್ಷರಾದ ಸಾವಿತ್ರಿ ಗಂಗಾಧರ್ ಮಾತನಾಡಿ, ಭಾನುವಾರ ಮಧ್ಯಾಹ್ನದಿಂದ ರಾತ್ರಿವರೆಗೂ ನಾಟಕ ಪ್ರದರ್ಶನ ಇರಲಿದೆ. ನಾವೇ ತರಬೇತಿ ಪಡೆದು ಅಭಿನಯ ಮಾಡುತ್ತಿದ್ದೇವೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಮಗೆ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿದರು. ಈ ಮೂಲಕ ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತ ಅಲ್ಲ, ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ಅಂತೆಯೇ ನಾಟಕ ಕಲೆಯಲ್ಲೂ ನಮ್ಮ ಕಲಾವಂತಿಕೆ ಪ್ರದರ್ಶನ ಮಾಡಬೇಕು ಎಂಬ ಆಸೆಯಿಂದ ಈ ಪ್ರಯತ್ನ ಮಾಡಿದ್ದೇವೆ ಎಂದರು.

ಈ ನಾಟಕದಲ್ಲಿ ೨೫ ಜನ ಮಹಿಳೆಯರು ಪ್ರದರ್ಶನ ಮಾಡುತ್ತಿದ್ದೇವೆ. ಇದಕ್ಕಾಗಿ ಹಾರ‍್ಮೋನಿಯಂ ಮಾಸ್ಟರ್ ಪಾಲಾಕ್ಷಚಾರ್ ಅವರಿಂದ ಮೂರು ತಿಂಗಳಿಂದ ತರಬೇತಿ ಪಡೆದಿದ್ದು, ನಮಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ವಿವಿಧ ಪಾತ್ರಧಾರಿಗಳಾದ ಶಶಿಕಲಾ, ಸಾವಿತ್ರಿ, ಶ್ವೇತಾ, ಜಿ.ಕುಮಾರ್, ಅನಿತಾ, ಕಾಮಾಕ್ಷಿ ಮೊದಲಾದವರಿದ್ದರು.

error: Content is protected !!