ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಜೋಗಿಪುರ ಗ್ರಾಮದಲ್ಲಿ ಕಡಜಗಳ ದಾಳಿಗೆ ಒಳಗಾಗಿ ರೈತ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು 62 ವರ್ಷದ ಕಾಂತರಾಜು ಎಂದು ಗುರುತಿಸಲಾಗಿದೆ. ಅವರು ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ರಸ್ತೆಗೆ ಬಿದ್ದಿದ್ದ ತೆಂಗಿನ ಗರಿಯನ್ನು (ಎಡಮಟ್ಟೆ) ಪಕ್ಕಕ್ಕೆ ಹಾಕಲು ಯತ್ನಿಸಿದರು. ಈ ಎಡಮಟ್ಟೆಯಲ್ಲಿ ಗೂಡು ಕಟ್ಟಿಕೊಂಡಿದ್ದ ಕಡಜಗಳು ಅಕಸ್ಮಾತ್ ದಾಳಿ ನಡೆಸಿ ಕಾಂತರಾಜು ಅವರನ್ನು ತೀವ್ರವಾಗಿ ಕಚ್ಚಿದವು.
ಅದರ ಪರಿಣಾಮ ಅಸ್ವಸ್ಥಗೊಂಡಿದ್ದ ಕಾಂತರಾಜುವನ್ನು ಕುಟುಂಬಸ್ಥರು ಮೊದಲು ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುತ್ತಿರುವ ವೇಳೆ ಮಾರ್ಗ ಮಧ್ಯೆಯಲ್ಲೇ ಅವರು ಸಾವನ್ನಪ್ಪಿದರು.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.










