Halebeedu|ಹಳೇಬೀಡು:ಸಮೀಪದ ಅಡಗೂರು ಜೈನ ಬಸದಿಯಲ್ಲಿ ಶಾಂತಿನಾಥ ಸ್ವಾಮಿಯ ಆರಾಧನ ವಿಧಾನ ಹಾಗೂ 33ನೇ ವರ್ಷದ ಜಿನ ಮಂದಿರದ ವಾರ್ಷಿಕ ಪೂಜೆ ಭಾನುವಾರ ಭಕ್ತಿಭಾವದಿಂದ ವೈಭವವಾಗಿ ನೆರವೇರಿತು.
⛩️ ಮುಂಜಾನೆ ಧಾರ್ಮಿಕ ವಿಧಿವಿಧಾನ
ಮುಂಜಾನೆ 6.30ರಿಂದ ಬಸದಿಯಲ್ಲಿ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು. ಧರ್ಮ ಧ್ವಜಾರೋಹಣ ನೆರವೇರಿಸಿ, ನಿತ್ಯ ಪೂಜೆ ಬಳಿಕ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು.
🙏 ಭಕ್ತಿಭಾವದ ವಾತಾವರಣ:
ಮಿರಿಮಿರಿ ಮಿಂಚುವ ಬಟ್ಟೆಗಳನ್ನು ಧರಿಸಿದ್ದ ಮಹಿಳೆಯರು ಹಾಗೂ ಪುರುಷರು ಭಕ್ತಿಯಿಂದ ಪೂಜೆಯಲ್ಲಿ ಭಾಗವಹಿಸಿದರು. ಪುರೋಹಿತರ ಮಂತ್ರಘೋಷದ ನಡುವೆ ಮಂಡಲದಲ್ಲಿ ನವಕಳಸ ಪ್ರತಿಷ್ಠಾಪನೆ ನಡೆಸಿ ಆರಾಧನೆ ಆರಂಭಿಸಲಾಯಿತು.
🌸 ಶಾಂತಿ ಮತ್ತು ಸಮೃದ್ಧಿಗಾಗಿ ಪೂಜೆ
ಜಗತ್ತಿನಲ್ಲಿ ಸಮೃದ್ಧಿ ನೆಲೆಸಲಿ ಹಾಗೂ ಪ್ರತಿಯೊಬ್ಬರಿಗೂ ಸುಖ-ಶಾಂತಿ ದೊರಕಲಿ ಎಂಬ ಸಂಕಲ್ಪದೊಂದಿಗೆ ವಿವಿಧ ಪೂಜಾ ವಿಧಾನಗಳು ನೆರವೇರಿಸಲಾಯಿತು. ಮಂತ್ರ ಪಠನದೊಂದಿಗೆ ಜಿನ ಭಕ್ತಿ ಗೀತೆಗಳು ಸುಶ್ರಾವ್ಯವಾಗಿ ಮೊಳಗಿದವು. ಗಂಟೆ ಮತ್ತು ಜಾಗಟೆಗಳ ನಾದ ಭಕ್ತರನ್ನು ಭಾವನಾತ್ಮಕ ಲೋಕಕ್ಕೆ ಕರೆದೊಯ್ದಿತು.

🕉️ ಶಾಂತಿನಾಥರ ಸಂದೇಶ
ಶಾಂತಿನಾಥ ಎಂದಾಕ್ಷಣ ಶಾಂತಿಯ ಸಂದೇಶ ನೆನಪಾಗುತ್ತದೆ. ಜೀವನದಲ್ಲಿನ ಅಶಾಂತಿಯಿಂದ ಮುಕ್ತಿ ಪಡೆದು ಶಾಂತಿ ಸ್ಥಾಪಿಸಲು ಈ ಆರಾಧನೆ ನಡೆಯುತ್ತದೆ.
ತೀರ್ಥಂಕರರಾಗುವ ಮೊದಲು ಚಕ್ರವರ್ತಿಯಾಗಿದ್ದ ಶಾಂತಿನಾಥರು ತಮ್ಮ ಆಳ್ವಿಕೆಯಲ್ಲಿ ಸಕಲ ಜೀವಿಗಳಿಗೆ ಶಾಂತಿಯ ವಾತಾವರಣ ಕಲ್ಪಿಸಿದ್ದರು. ಅವರ ಆಡಳಿತದಲ್ಲಿ ದ್ವೇಷ ಮತ್ತು ಅಸೂಯೆ ಇಲ್ಲದ ಸಮಾಜ ನಿರ್ಮಾಣವಾಗಿತ್ತು ಎಂದು ಜೈನ ಸಮಾಜ ಮುಖಂಡರಾದ ಎಚ್.ಎಸ್. ಅನಿಲ್ ಕುಮಾರ್ ಹೇಳಿದರು.










