ಚನ್ನರಾಯಪಟ್ಟಣ: ಸ್ಪರ್ಧೆ ಎಂದ ಮೇಲೆ ಸೋಲು ಹಾಗೂ ಗೆಲುವು ಇದ್ದೇ ಇರುತ್ತದೆ. ಆದರೆ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಚ್.ಬಿ.ಲಕ್ಷ್ಮಣಗೌಡ ಹೇಳಿದರು.
ತಾಲೂಕಿನ ಹಿರೀಸಾವೆ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸೋಲು ಹಾಗೂ ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಸ್ವರ್ಧೆ ಯಾವುದೇ ಇರಲಿ ಭಾಗವಹಿಸಿದಲ್ಲಿ ಮಾತ್ರ ನಮ್ಮ ಸಾಮರ್ಥ್ಯ ತಿಳಿಯಲು ಸಾಧ್ಯ. ಇದು ನನ್ನಿಂದ ಆಗುತ್ತದೆಯೋ ಅಥವಾ ಇಲ್ಲವೋ ಎಂಬ ಗೊಂದಲ ಇರಬಾರದು. ಗೆದ್ದರೆ ಬಹುಮಾನ ಸಿಗಲಿದ್ದು, ಸೋತರೆ ಹೆಚ್ಚಿನ ಅನುಭವ ಉಂಟಾಗುತ್ತದೆ ಎಂದು ತಿಳಿಸಿದರು.
ನಮ್ಮ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿ ಹೆಚ್.ಆರ್.ಕೃಪಾಲ್ ವಿಕಲಚೇತನರಾಗಿದ್ದರು ಸಹ ಧೃತಿಗಿಡದೆ ಆತ್ಮವಿಶ್ವಾಸದೊಂದಿಗೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನಕ್ಕೆ ಭಾಜನರಾಗಿರುವುದು ನಮ್ಮ ಕಾಲೇಜಿಗೆ ಕೀರ್ತಿ ತಂದಿದ್ದು ಗೌರವ ಹೆಚ್ಚಿದೆ ಎಂದು ಶ್ಲಾಘಿಸಿದರು.
ಕಳೆದ ವಾರ ಮೈಸೂರಿನಲ್ಲಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಮುಕ್ತ ಗಂಗೋತ್ರಿ ಮೈಸೂರು ವತಿಯಿಂದ ಸಂವಿಧಾನ ದಿನಾಚರಣೆ ಪ್ರಯುಕ್ತ ಸ್ನಾತಕ/ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಭಾರತದ ಪ್ರಗತಿಯಲ್ಲಿ ಸಂವಿಧಾನದ ಆದರ್ಶಗಳ ಪ್ರಾಮುಖ್ಯತೆ’ ಎಂಬ ವಿಷಯ ಕುರಿತ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ತೃತೀಯ ಸ್ಥಾನ ಪಡೆದ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಹೆಚ್.ಆರ್.ಕೃಪಾಲ್ ಅವರನ್ನು ಅಭಿನಂದಿಸಲಾಯಿತು.
ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಯ ಪಾಲಕರಾದ ಹೆಚ್.ಕೆ.ರಘು, ಸಿ.ಕೆ.ಗೀತಾ ಹಾಗೂ ಇತರರು ಪಾಲ್ಗೊಂಡಿದ್ದರು.









