ಹಾಸನ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಾರ್ಟಿಯ ಹಿರಿಯ ನಾಯಕ ಎಚ್.ಡಿ. ದೇವೇಗೌಡರು ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ, ಮೊಸಳೆಹೊಸಳ್ಳಿ ದುರಂತ, ಕಾವೇರಿ ವಿಚಾರ, ರಸ್ತೆ ಕಾಮಗಾರಿಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದರು.
ಮೊಸಳೆಹೊಸಳ್ಳಿ ದುರಂತ – ಪರಿಹಾರ ಘೋಷಣೆ
ಗಣೇಶ ಮೆರವಣಿಗೆಯ ವೇಳೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ ₹1 ಲಕ್ಷ, ತೀವ್ರ ಗಾಯಾಳುಗಳಿಗೆ ₹25,000, ಗಾಯಾಳುಗಳಿಗೆ ₹20,000, ಸಣ್ಣ ಗಾಯಾಳುಗಳಿಗೆ ₹15,000 ಪರಿಹಾರ ನೀಡಲಾಗುವುದಾಗಿ ದೇವೇಗೌಡರು ಘೋಷಿಸಿದರು. “ಪಕ್ಷದಲ್ಲಿ ಹಣ ಇರಲಿ ಇಲ್ಲದೇ ಇರಲಿ ಜವಾಬ್ದಾರಿ ಹೊತ್ತುಕೊಂಡಿದ್ದೇನೆ” ಎಂದರು.
ರಾಜಕೀಯ ನಿವೃತ್ತಿ ಇಲ್ಲ
“ನಾನು ರಾಜಕೀಯದಿಂದ ನಿವೃತ್ತಿ ಆಗಲ್ಲ. ಈಗ ವೀಲ್‌ಚೇರ್‌ನಲ್ಲಿ ಬಂದಿದ್ದೇನೆ, ಪಾರ್ಲಿಮೆಂಟ್‌ಗೂ ವೀಲ್‌ಚೇರ್‌ನಲ್ಲಿ ಹೋಗ್ತೇನೆ. ನನಗೆ ಶಕ್ತಿ, ಅರ್ಹತೆ ಇದೆ. 65 ವರ್ಷಗಳ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿದ್ದೇನೆ, ಮುಂದುವರಿಸುತ್ತೇನೆ” ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಕಾವೇರಿ–ಗೋದಾವರಿ ವಿಚಾರ
- “ಕಾವೇರಿ ವಿಚಾರದಲ್ಲಿ ಪ್ರಧಾನಮಂತ್ರಿಗೆ ಮನವರಿಕೆ ಮಾಡುತ್ತೇನೆ, ಕರ್ನಾಟಕಕ್ಕೆ ಏನು ನಷ್ಟವಾಗಿದೆ ಹೇಳುತ್ತೇನೆ.”
- ಗೋದಾವರಿ ನೀರನ್ನು ಆಂಧ್ರ–ತೆಲಂಗಾಣಕ್ಕೆ ಬಿಡುವ ನಿರ್ಣಯದ ವಿರುದ್ಧ ತಮ್ಮ ಧ್ವನಿ ಎತ್ತಿದ್ದೇನೆ.
- “ಸರ್ಕಾರ ಸಲಹೆ ಕೊಟ್ಟರೆ ನಾನು ಸ್ವೀಕರಿಸುತ್ತೇನೆ” ಎಂದರು.
ಪ್ರಧಾನಮಂತ್ರಿ ಮೋದಿ ಕುರಿತು
“ಪ್ರಧಾನಿ ನರೇಂದ್ರಮೋದಿ ವಿಶ್ವದ ಮಹಾನಾಯಕರು. ಮಣಿಪುರದಲ್ಲಿ ಶಾಂತಿ ತರಲು ಪ್ರಯತ್ನಿಸಿದ್ದಾರೆ. ವಿರೋಧ ಪಕ್ಷ ಟೀಕೆ ಮಾಡಿದ್ದರೂ ನಾನು ಅವರನ್ನು ಗೌರವಿಸುತ್ತೇನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಸ್ತೆ ಕಾಮಗಾರಿಗಳ ಬೇಡಿಕೆ
- ಚೆನ್ನೈ–ಬೆಂಗಳೂರು ರಸ್ತೆ ಬಾಕಿ ಕಾಮಗಾರಿ ತ್ವರಿತ ಪೂರ್ಣಗೊಳಿಸಬೇಕು.
- ಶಿರಾಡಿಘಾಟ್‌ನಲ್ಲಿ 10 ಕಿ.ಮೀ ಟನಲ್ ನಿರ್ಮಿಸಬೇಕೆಂದು ಒತ್ತಾಯ.
- ಹೈದರಾಬಾದ್–ಬೆಂಗಳೂರು ರಸ್ತೆ ಕಾಮಗಾರಿ ಕೂಡ ತ್ವರಿತಗೊಳಿಸುವಂತೆ ಬೇಡಿಕೆ.
ರಾಜ್ಯಸಭೆ ಅವಧಿ–ಮುಂದಿನ ಹೋರಾಟ
“ರಾಜ್ಯಸಭಾ ಸದಸ್ಯರ ಅವಧಿ ಇನ್ನೂ 11 ತಿಂಗಳು ಇದೆ. ಅವಧಿ ಮುಗಿದ ಮೇಲೂ ಶಕ್ತಿಮೀರಿ ಹೋರಾಡುತ್ತೇನೆ. ನನ್ನ ಜೀವನದಲ್ಲಿ ಅನೇಕ ನೋವು–ಕಷ್ಟಗಳಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಹೋರಾಟ ಬಿಟ್ಟುಕೊಳ್ಳುವುದಿಲ್ಲ”
-ಎಚ್.ಡಿ.ದೇವೇಗೌಡ










