ಚನ್ನರಾಯಪಟ್ಟಣ: ಧಾರ್ಮಿಕ ಕೇಂದ್ರಗಳಿಂದ ಮನಸ್ಸಿಗೆ ನೆಮ್ಮದಿ

Former President of Hirisave Gram Panchayat, H.E. Boranna, said that visiting temples, offering prayers and meditating will bring peace and tranquility to the mind.

ಚನ್ನರಾಯಪಟ್ಟಣ: ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಸಿಗಲಿದೆ ಎಂದು ಹಿರೀಸಾವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಈ.ಬೋರಣ್ಣ ಹೇಳಿದರು.

ತಾಲ್ಲೂಕಿನ ಹಿರೀಸಾವೆ ಗ್ರಾಮದ ಮುದ್ರೆಕಲ್ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ 60 ಲಕ್ಷ ರೂ. ವೆಚ್ಚದೊಂದಿಗೆ ನಿರ್ಮಾಣದ ಹಂತದಲ್ಲಿರುವ 45 ಅಡಿ ಎತ್ತರದ ಶ್ರೀ ಆಂಜನೇಯಸ್ವಾಮಿ ಮೂರ್ತಿಯ ನಿರ್ಮಾಣ ಕಾಮಗಾರಿಗೆ 50 ಸಾವಿರ ರೂ. ದೇಣಿಗೆ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಮನುಷ್ಯ ಅದೆಷ್ಟೇ ದುಡಿದು ಹಣ, ಆಸ್ತಿ ಸಂಪಾದಿಸಿದರೂ ಅದಕ್ಕಿಂತ ಮನಸ್ಸಿಗೆ ನೆಮ್ಮದಿ ಮುಖ್ಯವಾಗಿರುತ್ತದೆ. ತಾವು ದುಡಿದ ಹಣದಲ್ಲಿ ಸ್ವಲ್ಪವನ್ನಾದರೂ ಧರ್ಮ ಕಾರ್ಯಗಳಿಗೆ ವಿನಿಯೋಗಿಸದಿದ್ದರೆ ಕೊಪ್ಪರಿಗೆಯಷ್ಟು ಕೂಡಿಟ್ಟರು ಅದು ವ್ಯರ್ಥವಾಗಲಿದೆ ಎಂದು ತಿಳಿಸಿದರು.

ತಂದೆ-ತಾಯಿ ಹಾಗೂ ಗುರು-ಹಿರಿಯರಿಗೆ ಗೌರವ ನೀಡುವುದರ ಜೊತೆಗೆ ಧರ್ಮ ಕಾರ್ಯಗಳಲ್ಲಿ ತೊಡಗಿಕೊಂಡರೆ, ಕಾಲದ ನಂತರವೂ ನಾವು ಮಾಡಿದ ಪುಣ್ಯ ಕಾರ್ಯಗಳು ಶಾಶ್ವತವಾಗಿ ಉಳಿಯಲಿವೆ ಎಂದರು.

ಆಧುನಿಕತೆಯೊಂದಿಗೆ ಶಿಕ್ಷಣ ವ್ಯವಸ್ಥೆಯು ಬೆಳೆದಂತೆಲ್ಲ ವರ್ಷದಿಂದ ವರ್ಷಕ್ಕೆ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಾಜದಲ್ಲಿ ಅಪಾಯಕಾರಿ ಬೆಳವಣಿಗೆಯಾಗುತ್ತಿದೆ. ಮೌಲ್ಯಯುತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಸಿಗದೇ ಸಮಾಜ ಬದಲಾವಣೆಗೊಳ್ಳಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡರಾದ ಎಚ್.ಈ‌.ಬೋರಣ್ಣ ಹಾಗೂ ಹೆಚ್.ಜೆ.ದಿನೇಶ್ ಅವರು ಒಟ್ಟು 50 ಸಾವಿರ ರೂ. ದೇಣಿಗೆಯನ್ನು ದೇಗುಲದ ಸಮಿತಿಗೆ ಹಸ್ತಾಂತರಿಸಿದರು. ನಂತರ ಮುದ್ರಿಕಲ್ ಆಂಜನೇಯ ಸ್ವಾಮಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್‌.ಜಿ.ರಾಮಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಎಸ್.ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಸದಸ್ಯೆ ವೇದಾವತಿ ಮಂಜುನಾಥ್, ಸೊಸೈಟಿ ನಿರ್ದೇಶಕ ಹಿಂದ್ಲಟ್ಟಿ ಬೋರೇಗೌಡ, ಪ್ರಮುಖರಾದ ವೆಂಕಟೇಶ್, ಫೈನಾನ್ಸ್ ಮಹೇಶ್, ಮಂಜುನಾಥ್, ರೋಡ್ ಮಂಜು, ಬಾಬು ಹಾಗೂ ಇತರರು ಇದ್ದರು.