ಹಾಸನ: ನಾಡಿನ ವಾಲ್ಮೀಕಿ ಸಮುದಾಯದ ಹಿರಿಯ ನಾಯಕರಾದ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ವಾಪಸ್ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲೆ ಹಾಗೂ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಜಿಲ್ಲಾ ದಲಿತ ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ಮಾದಿಗ ದಂಡೋರ ಹಾಗೂ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಜಾವಗಲ್ ಇಂದ್ರೇಶ್, ನೇರವಾಗಿ ಮಾತನಾಡುವ, ನೇರ ನಡೆ-ನುಡಿಯ ದೀನ ದಲಿತರ ನಾಯಕನನ್ನು ಸಂಪುಟದಿಂದ ವಜಾ ಮಾಡಿರುವುದು ಖಂಡನೀಯ ಎಂದರು.
ಯಾರದೋ ಒತ್ತಡಕ್ಕೆ ಮಣಿದು ಸಂಪುಟದಿಂದ ತೆಗೆದು ಹಾಕಿರುವುದು ಸರಿಯಲ್ಲ, ರಾಜಕೀಯ ಮಾತ್ರವಲ್ಲದೆ, ಸಹಕಾರ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ ಮಾಡಿದ್ದಾರೆ. ಇವರನ್ನು ಏಳಿಗೆಯನ್ನು ಸಹಿಸದೆ, ಷಡ್ಯಂತ್ರ ಮಾಡಿ ಮಂತ್ರಿಸ್ಥಾನ ಕಸಿದುಕೊಳ್ಳಲಾಗಿದೆ ಎಂದು ದೂರಿದರು.
ಇದಕ್ಕೆ ನಿಖರ ಕಾರಣ ಕೊಡಬೇಕು, ಹೈಕಮಾಂಡ್ ಉತ್ತರ ನೀಡಬೇಕು. ಕಾಂಗ್ರೆಸ್‌ನ ಈ ನಡೆಯಿಂದ ಸಮಸ್ತ ದಲಿತ ಸಮುದಾಯಗಳಿಗೆ ನೋವಾಗಿದೆ. ಇದು ಸರಿ ಹೋಗಬೇಕಾದರೆ ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಮತ್ತೊಬ್ಬ ದಲಿತ ಮುಖಂಡ ದಿನೇಶ್ ಮಾತನಾಡಿ, ಕೂಡಲೇ ರಾಜಣ್ಣ ಅವರನ್ನು ಮತ್ತೆ ಮಂತ್ರಿ ಮಾಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ದಲಿತರ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಎಚ್ಚರಿಸಿದರು.
ಈ ಬಗ್ಗೆ ಸರ್ಕಾರದಲ್ಲಿರುವ ದಲಿತ ಸಮುದಾಯದ ಶಾಸಕರು, ಸಚಿವರೂ ದನಿ ಎತ್ತಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದಲ್ಲಿ ದಲಿತರನ್ನೂ ಸಿಎಂ ಮಾಡಿ ಎಂದು ಹೋರಾಟಕ್ಕೆ ಕರೆ ನೀಡುವುದಾಗಿಯೂ ಹೇಳಿದರು.
ಬೇಲೂರು ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಮಧುನಾಯಕ ಮಾತನಾಡಿ, ರಾಜಣ್ಣ ಅವರು ಅಧಿಕಾರ ಇದ್ದಾಗ ಬಡವರ ಪರ ಕೆಲಸ ಮಾಡಿ ತಮ್ಮದೇ ಕೊಡುಗೆ ನೀಡಿದ್ದಾರೆ.
ಯಾರದೋ ಮಾತು ಕೇಳಿ ನಮ್ಮ ನಾಯಕರನ್ನು ಸಂಪುಟದಿಂದ ವಜಾ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು. ರಾಜಣ್ಣ ಅವರು ಕ್ಷಮಿಸಲಾರದ ಮಾತುಗಳನ್ನೇನು ಆಡಿಲ್ಲ, ಮಹಾಪರಾಧವೂ
ಅಲ್ಲ, ನೋಟಿಸ್ ನೀಡಿಯೋ ಅಥವಾ ಎಚ್ಚರಿಕೆ ಕೊಟ್ಟೋ ಮತ್ತೊಂದು ಅವಕಾಶ ನೀಡಬೇಕಿತ್ತು.
ಕೂಡಲೇ ಕಾಂಗ್ರೆಸ್ ಹೈಕಮಾಂಡ್ ತನ್ನ ತಪ್ಪಿನ ಅರಿವಾಗಿ ರಾಜಣ್ಣ ಅವರನ್ನು ಮರಳಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲವಾದರೆ ಜಿಲ್ಲಾದ್ಯಂತ, ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ವಾಲ್ಮೀಕಿ ನಾಯಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ಪನಾಯಕ, ಆಲೂರು ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ದೇವರಾಜು, ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಗಣೇಶ್ ನಾಯಕ್ ಇದ್ದರು.










