10.1 C
Munich
Home News Politics ಹಾಸನ: ಗಣೇಶೋತ್ಸವ ದುರಂತಕ್ಕೆ ಪೊಲೀಸ್ ವೈಫಲ್ಯವೇ ಕಾರಣ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲೇಬೇಕು: ಮಾಜಿ ಸಚಿವ ಎಚ್.ಡಿ.ರೇವಣ್ಣ...

ಹಾಸನ: ಗಣೇಶೋತ್ಸವ ದುರಂತಕ್ಕೆ ಪೊಲೀಸ್ ವೈಫಲ್ಯವೇ ಕಾರಣ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲೇಬೇಕು: ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹ

Former Minister H.D. Revanna has expressed deep anger over the death of ten students in the Mosalehosahalli Ganeshotsava tragedy, alleging that the negligence of the police department and the failure of the government are the reasons for this tragedy.

ಹಾಸನ: ಮೊಸಳೆಹೊಸಹಳ್ಳಿ ಗಣೇಶೋತ್ಸವ ದುರಂತದಲ್ಲಿ ಹತ್ತು ಮಂದಿ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆಯ ಕುರಿತು ಮಾಜಿ ಸಚಿವ ಎಚ್.ಡಿ. ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಮತ್ತು ಸರ್ಕಾರದ ವೈಫಲ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಪೊಲೀಸ್ ಇಲಾಖೆ ಸರ್ಕಾರದ ಅಡಿಯಲ್ಲಿ ಬರುತ್ತದೆ. ಆದ್ದರಿಂದ ಇದು ಸರ್ಕಾರದ ವೈಫಲ್ಯ. ಐದು ನೂರು ಮೀಟರ್ ಹಿಂದೆ ಬ್ಯಾರಿಕೇಡ್ ಹಾಕಿ ಇಬ್ಬರು ಪೊಲೀಸರನ್ನು ನಿಯೋಜಿಸಿದ್ದರೆ, ಮೆರವಣಿಗೆ ಮುಗಿಯುವವರೆಗೂ ಟ್ರಾಫಿಕ್ ಬಂದ್ ಮಾಡಿದ್ದರೆ ಹತ್ತು ಜನರ ಜೀವ ಉಳಿಸಬಹುದಿತ್ತು” ಎಂದು ಆರೋಪಿಸಿದರು.

“ಜಿಲ್ಲಾ ಉಸ್ತುವಾರಿ ಸಚಿವರು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ತನಿಖೆ ಏನಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು. ಗೃಹಸಚಿವರು ಸ್ವತಃ ಸ್ಥಳಕ್ಕೆ ಬಂದು ಪರಿಶೀಲಿಸಬೇಕು. ನಾಲ್ಕು ಸಾವಿರ ವಿದ್ಯಾರ್ಥಿಗಳಿರುವ ಗ್ರಾಮದಲ್ಲಿ ಐದು–ಆರು ಸಾವಿರ ಜನ ಸೇರುತ್ತಾರೆ. ಇಂತಹ ಸಂದರ್ಭದಲ್ಲಿ ಮೊದಲೇ ಎಸ್ಪಿ ಸಭೆ ನಡೆಸಬೇಕಿತ್ತು. ಎಸ್‌ಬಿ ಡ್ಯೂಟಿಯವರು ಯಾವ ವರದಿ ನೀಡಿದ್ದರು ಎಂಬುದೂ ಬಹಿರಂಗವಾಗಬೇಕು. ಯಾವ ಅಧಿಕಾರಿಯ ತಪ್ಪಿದೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಘಟನೆಯಲ್ಲಿ ಇನ್ನೊಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿರುವ ಅವರು, ಎಲ್ಲ ಮೃತರ ಕುಟುಂಬಗಳಿಗೆ ಅಪಘಾತ ವಿಮೆ ಪರಿಹಾರದ ಹಣ ತಲುಪುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಹೆಚ್ಚಿನ ಪರಿಹಾರವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಪೊಲೀಸರ ವರ್ತನೆಗೂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಅಮಾಯಕರನ್ನು ಕರೆತಂದು ಪೊಲೀಸರು ಹಲ್ಲೆ ನಡೆಸುತ್ತಿದ್ದಾರೆ. ದುದ್ದ ಮಹಿಳಾ ಪಿಎಸ್‌ಐ ಒಬ್ಬ ವಿದ್ಯಾರ್ಥಿಯ ಶರ್ಟ್ ಬಿಚ್ಚಿಸಿ ಹೊಡೆದಿದ್ದಾರೆ” ಎಂದು ಆರೋಪಿಸಿದರು.

“ನಾನು ಒಂದು ವಾರದ ಗಡುವು ನೀಡಿದ್ದೇನೆ. ಆ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ನಮ್ಮ ಶಾಸಕರು ಚರ್ಚಿಸಿ ಮುಂದೆ ಏನು ಮಾಡಬೇಕೆಂದು ತೀರ್ಮಾನಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

error: Content is protected !!