ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು, ಇಂದು ಪತ್ನಿ ಭವಾನಿ ಅವರ ಜೊತೆ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದರು. ಯಾವುದೇ ಶಿಷ್ಟಾಚಾರ ಪಾಲನೆ ಮಾಡದೆ, ಯಾವುದೇ ಅಧಿಕಾರಿಗಳ ಗಮನಕ್ಕೂ ತಾರದೇ, ತಮ್ಮ ಕಾರಿನಲ್ಲಿ ನೇರವಾಗಿ ಬಂದು ಅನತಿ ದೂರ ನಡೆದುಕೊಂಡೇ ದೇವಾಲಯಕ್ಕೆ ಆಗಮಿಸಿದರು.
ರೇವಣ್ಣ ಅವರು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರಾಗಿರುವುದರಿಂದ ಇವರಿಗೆ ವಿಶೇಷ ಭದ್ರತೆ ಇದೆ. ಅದನ್ನೂ ಬಿಟ್ಟು ತಮ್ಮದೇ ಕಾರಿನಲ್ಲಿ ತಮ್ಮದೇ ಭದ್ರತಾ ವ್ಯವಸ್ಥೆಯೊಂದಿಗೆ ರೇವಣ್ಣ ದೇವಿ ದರ್ಶನಕ್ಕೆ ಆಗಮಿಸಿದ್ದರು.
ಈ ವೇಳೆ ಅವರ ಕಾರನ್ನು ತಡೆದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ರೇವಣ್ಣ ಗರಂ ಆದರು. ಪತ್ನಿ ಭವಾನಿ ಜೊತೆ 1ಸಾವಿರ ಮೊತ್ತದ 5 ಟಿಕೆಟ್ ಪಡೆದು ನೇರ ದರ್ಶನ ಪಡೆದರು. ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ಗರ್ಭಗುಡಿಯೊಳಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ತಂದೆ ದೇವೇಗೌಡರು, ತಾಯಿ, ಚೆನ್ನಮ್ಮ, ಸಹೋದರ ಕುಮಾರಸ್ವಾಮಿ, ನಾದಿನಿ ಅನಿತಾ ಕುಮಾರಸ್ವಾಮಿ, ಪುತ್ರರಾದ ನಿಖಿಲ್ ಕುಮಾರಸ್ವಾಮಿ, ಡಾ.ಸೂರಜ್ ರೇವಣ್ಣ, ಪರಪ್ಪನ ಅಗ್ರಹಾರದಲ್ಲಿರುವ ಪ್ರಜ್ವಲ್ ರೇವಣ್ಣ ಸೇರಿ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ಇದೇ ವೇಳೆ ಬ್ಯಾಹ್ಮಿ, ಕೌಮಾರಿ, ಮಹೇಶ್ವರಿ ಮೂರೂ ದೇವರ ಮೇಲಿದ್ದ ಕುಂಕುಮವನ್ನು ರೇವಣ್ಣ ಕೇಳಿ ಪಡೆದು.
ಅದನ್ನು ಪ್ರತ್ಯೇಕವಾಗಿ ಬಾಕ್ಸ್ನಲ್ಲಿ ಕುಂಕುಮ, ದೇವರ ಮೇಲಿದ್ದ ಹೂವು ಕೊಂಡೊಯ್ದರು. ಈ ವೇಳೆ ರೇವಣ್ಣ ದಂಪತಿಗೆ ಹಾಸನ ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಚನ್ನವೀರಪ್ಪ ಮೊದಲಾದವರು ಸಾಥ್ ನೀಡಿದರು. ಬಳಿಕ ಮಾತನಾಡಿದ ರೇವಣ್ಣ ನಾನು 1ಸಾವಿರ ರೂ.ಮೊತ್ತದ 5 ಟಿಕೆಟ್ ಖರೀದಿಸಿ ಬಂದು ದೇವಿಯ ದರ್ಶನ ಪಡೆದಿದ್ದೇನೆ.ಜಿಲ್ಲೆ ಮತ್ತು ರಾಜ್ಯದ ಜನತೆಗೆ ಒಳಿತಾಗಲಿ ಎಂದು ಬೇಡಿಕೊಂಡಿದ್ದೇನೆ.ಜಿಲ್ಲೆ, ನಾಡಿಗೆ ಒಳ್ಳೆಯ ಮಳೆ, ಬೆಳೆ ಆಗಿ ಜನ ಸಮೃದ್ಧಿಯಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ವ್ಯವಸ್ಥೆ ಬಗ್ಗೆ ಕೇಳಿದ್ದಕ್ಕೆ ನನಗೆ ಗೊತ್ತಿಲ್ಲ, ನಾನು ಕೇಳಲು ಹೋಗಲ್ಲ, ಟೈಂ ಬರುತ್ತೆ ಬಿಡಿ ಎಂದರು. ದೇವೇಗೌಡರ ಆರೋಗ್ಯದ ಬಗ್ಗೆ ತಾಯಿ ಇದ್ದಾರೆ, ಅವರು ರಕ್ಷಣೆ ಕೊಡ್ತಿದ್ದಾರೆ. ದೇವೇಗೌಡರಿಗೆ, ನನಗೆ ಕುಮಾರಸ್ವಾಮಿಗೆ ತಾಯಿ ಅನುಗ್ರಹ ಇದೆ ಎಂದರು. ಜೊತೆಗೆ ರಂಗನಾಥಸ್ವಾಮಿ, ವೆಂಕಟೇಶ್ವರ ಸ್ವಾಮಿ ಎಲ್ಲಾ ಇದ್ದಾರೆ ಎಂದು ಉತ್ತರಿಸಿದರು.
ಆರ್‌ಎಸ್‌ಎಸ್ ನಿಷೇಧ ಮಾಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಗೊತ್ತಿಲ್ಲಪ್ಪ ಅಷ್ಟು ದೊಡ್ಡದಾಗಿ ನಾನು ಬೆಳೆದಿಲ್ಲ ಎಂದಷ್ಟೇ ಹೇಳಿ ಹೊರಟರು.










