ಹಾಸನ, ಜೂನ್ 14, 2025: ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ನೇರವಾಗಿ ಹೊಣೆಯಾಗಿದೆ ಎಂದು ಮಾಜಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ್ ಆರೋಪಿಸಿದರು.
ಸಚಿವ ಈಶ್ವರ್ ಖಂಡ್ರೆ ಅವರ “ವಿಮಾನ ದುರಂತಕ್ಕೆ ಹೊಣೆಹೊತ್ತು ಪ್ರಧಾನಮಂತ್ರಿ ರಾಜೀನಾಮೆ ನೀಡಲಿ” ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, “ಕಾಲ್ತುಳಿತ ಪ್ರಕರಣದ ತನಿಖೆಯನ್ನು ಮುಕ್ತವಾಗಿ ನಡೆಸಿ, ನೈತಿಕತೆ ಇದ್ದರೆ ಈಶ್ವರ್ ಖಂಡ್ರೆ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡಲು ಒತ್ತಾಯಿಸಲಿ” ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಆಗ್ರಹಿಸಿದರು.
ವಿಮಾನ ದುರಂತದ ಬಗ್ಗೆ ತನಿಖೆ ನಡೆಯುತ್ತಿದ್ದು, “ತಪ್ಪುಗಳು ಏನೆಂಬುದು ಮತ್ತು ಕೇಂದ್ರ ಸರ್ಕಾರದ ಪಾತ್ರ ಇದ್ದರೆ ಅದು ತನಿಖೆಯಿಂದ ತಿಳಿಯಲಿದೆ” ಎಂದರು. ಆದರೆ, ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಕಾರಣಕರ್ತ ಎಂದು ಜನತೆಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
“ಈಶ್ವರ್ ಖಂಡ್ರೆಗೆ ಕಿವಿ ಕೇಳಿಸುವುದಿಲ್ಲ, ಕಣ್ಣು ಕಾಣುವುದಿಲ್ಲ, ಬಾಯಿಯೂ ಇಲ್ಲವೇನೋ?” ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನವಿರೋಧಿ ಆಡಳಿತ ನೀಡುತ್ತಿದೆ ಎಂದು ಟೀಕಿಸಿದರು. “ರಾಜ್ಯದಲ್ಲಿ ನಡೆದ ಘಟನೆಗೆ ಯಾರು ಕಾರಣಕರ್ತರು ಎಂದು ಈಶ್ವರ್ ಖಂಡ್ರೆ ಅವರಿಗೆ ಆತ್ಮಸಾಕ್ಷಿ ಇದ್ದರೆ ಸ್ಪಷ್ಟವಾಗಿ ಹೇಳಲಿ” ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಬದಲಾವಣೆಯ ಕುರಿತು ಮಾತನಾಡಿದ ಅಶ್ವತ್ಥನಾರಾಯಣ್, “ಯಾರು ಇದ್ದಾರೆ? ಯಾರು ಬದಲಾಗುತ್ತಾರೆ? ಎಂಬುದು ಕಾಂಗ್ರೆಸ್ನ ಆಂತರಿಕ ವಿಚಾರ. ಆದರೆ, ಇಡೀ ಸಚಿವ ಸಂಪುಟ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ತೊಡಗಿದೆ” ಎಂದರು.
“ಕಾಂಗ್ರೆಸ್ ಪಕ್ಷ ಜನವಿರೋಧಿಯಾಗಿದೆ. ಜನರು ಇವರಿಗೆ ಅಧಿಕಾರ ಕೊಟ್ಟು ಬೇಸರಗೊಂಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇಂತಹ ಕೆಟ್ಟ, ಜನವಿರೋಧಿ ಸರ್ಕಾರ ಎಂದೂ ಕಂಡಿಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದರು.










