ಹಾಸನ: ಹೇಮಾವತಿ ಉದ್ಯಾನವನ ನಿರ್ಮಾಣಕ್ಕೆ ಆಗ್ರಹ

For this purpose, on December 14, 2023, people held a peaceful protest in front of the Hemavati Reservoir Project Office in Gorur and demanded that the government take immediate action.

ಹಾಸನ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬುವ ಮಹತ್ವಾಕಾಂಕ್ಷೆಯ ಗೊರೂರಿನ ಹೇಮಾವತಿ ಅಣೆಕಟ್ಟೆ ತಳಭಾಗದಲ್ಲಿರುವ 530 ಎಕರೆ ಪಾಳು ಪ್ರದೇಶದಲ್ಲಿ ಹೇಮಾವತಿ ಬೃಂದಾವನ ನಿರ್ಮಿಸಲು ಸರ್ಕಾರದಿಂದ 200 ಕೋಟಿ ಅನುದಾನ ನೀಡುವಂತೆ ಗೊರೂರು ಹೇಮಾವತಿ ಬೃಂದಾವನ ನಿರ್ಮಾಣ ಹೋರಾಟ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಜಿ.ಆರ್. ಹೇಮರಾಜು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಹೇಮಾವತಿ ಜಲಾಶಯ ಯೋಜನೆ ಆರಂಭವಾಗಿ 60 ವರ್ಷಗಳಾದರೂ, ಅಣೆಕಟ್ಟಿನ ಮುಂಭಾಗ ಹಾಗೂ ಹಿನ್ನಿರಿಗೆ ಬಳಸಿ ಸರ್ಕಾರ ಸ್ವಾಧೀನಪಡಿಸಿಕೊಂಡ ಸುಮಾರು 750 ಎಕರೆ ಭೂಮಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಜರುಗದಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ ಎಂದರು.

ಇದೇ ಉದ್ದೇಶಕ್ಕಾಗಿ 2023 ಡಿ.14 ರಂದು ಗೊರೂರಿನ ಹೇಮಾವತಿ ಜಲಾಶಯ ಯೋಜನಾ ಕಚೇರಿ ಎದುರು ಜನರು ಶಾಂತಿಯುತ ಪ್ರತಿಭಟನೆ ನಡೆಸಿ ಸರ್ಕಾರ ತಕ್ಷಣ ಕ್ರಮಕ್ಕೆ ಬರಬೇಕೆಂದು ಒತ್ತಾಯಿಸಲಾಗಿತ್ತು.

ಅಣೆಕಟ್ಟಿನಿಂದ ಪಡೆದ ಭೂಮಿಯಲ್ಲಿ ಇಂದು 530 ರಿಂದ 730 ಎಕರೆ ಪ್ರದೇಶ ಪಾಳು ಬಿದ್ದಿದ್ದು, ಗಿಡಗಂಟಿಗಳಿಂದ ಆವೃತ್ತವಾಗಿದೆ. ಜಿಲ್ಲೆಯ ಹೆಮ್ಮೆಯ ತಾಣವಾಗಬೇಕಾದ ಗೊರೂರು ಅಣೆಕಟ್ಟಿನ ಸೌಂದರ್ಯ ಹಾಳಾಗಿರುವುದು ಬೇಸರ ತರಿಸಿದೆ ಎಂದರು.

ಹೀಗಿರುವಾಗ ಕೆ.ಆರ್.ಎಸ್. ಬೃಂದಾವನ ಮಾದರಿಯಲ್ಲಿ ಇಲ್ಲಿ ಪ್ರವಾಸೋದ್ಯಮ ಕೇಂದ್ರ, ಉದ್ಯಾನವನ, ಸಂಗೀತ ಕಾರಂಜಿ, ಸಸ್ಯೋದ್ಯಾನ, ಪಾದಚಾರಿ ಮಾರ್ಗ, ಮಿನಿ ಅಕ್ವೇರಿಯಂ, ಮಕ್ಕಳ ಉದ್ಯಾನ, ಪ್ರಕೃತಿ ಸಂಗ್ರಹಾಲಯ ಮುಂತಾದ ಸೌಲಭ್ಯಗಳೊಂದಿಗೆ ಹೇಮಾವತಿ ಬೃಂದಾವನ ಅಭಿವೃದ್ಧಿ ಮಾಡಿದಲ್ಲಿ ಹಾಸನ ಜಿಲ್ಲೆಯ ಆಕರ್ಷಣೆಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ಈ ಯೋಜನೆ ಜಾರಿಗೆ ಬಂದ್ರೆ ಸ್ಥಳೀಯರಿಗೆ ಉದ್ಯೋಗಾವಕಾಶ, ವ್ಯಾಪಾರಸ್ಥರಿಗೆ ಚಟುವಟಿಕೆ, ಜಿಲ್ಲೆಗೆ ಪ್ರವಾಸಿಗರ ಪ್ರವಾಹ ಮತ್ತು ಐತಿಹಾಸಿಕ ಪ್ರದೇಶಕ್ಕೆ ಹೊಸ ಚೈತನ್ಯ ಸಿಗಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಮಲ್ಲೇಶ್, ಆನಂದ್, ಜಯಂತ್ ಇದ್ದರು.