ಛಲಬಿಡದ ಸಕಲೇಶಪುರದ ಪ್ರತಿಭೆ: ಕೋಚಿಂಗ್ ಇಲ್ಲದೆ UPSC ಪರೀಕ್ಷೆಯಲ್ಲಿ 389ನೇ Rank ಪಡೆದ ರೈತಪುತ್ರ ಮನೋಜ್

ಹಾಸನ ಜಿಲ್ಲೆಯ ಸಕಲೇಶಪುರದ ಗುರ್ಜಾನಹಳ್ಳಿ ಗ್ರಾಮದ ರೈತಪುತ್ರ ಜಿ.ಎಸ್. ಮನೋಜ್ UPSC ಪರೀಕ್ಷೆಯಲ್ಲಿ 389ನೇ ರ್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಕೋಚಿಂಗ್ ಇಲ್ಲದೆ ಸ್ವಯಂ ಅಧ್ಯಯನದಿಂದ ಸಾಧನೆ.

UPSC/ಹಾಸನ | ಸಕಲೇಶಪುರ | ಕನ್ನಡಪೋಸ್ಟ್ ವರದಿ  (kannadapost.com)ಕಠಿಣ ಪರಿಶ್ರಮ, ಸ್ಪಷ್ಟ ಗುರಿ ಮತ್ತು ಅಚಲವಾದ ಮನೋಬಲ ಇದ್ದರೆ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳೂ ದೇಶದ ಅತ್ಯುನ್ನತ UPSC ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಗುರ್ಜಾನಹಳ್ಳಿ ಗ್ರಾಮದ ಜಿ.ಎಸ್. ಮನೋಜ್ ಸಾಬೀತುಪಡಿಸಿದ್ದಾರೆ.

ಇತ್ತೀಚೆಗೆ ಪ್ರಕಟವಾದ UPSC ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶದಲ್ಲಿ ಮನೋಜ್ ಅವರು 389ನೇ ರ್ಯಾಂಕ್ ಗಳಿಸುವ ಮೂಲಕ ಸಕಲೇಶಪುರ ತಾಲ್ಲೂಕು ಹಾಗೂ ಹಾಸನ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.


ರೈತ ಕುಟುಂಬದಿಂದ ರಾಷ್ಟ್ರಮಟ್ಟದ ಸಾಧನೆ

ಮನೋಜ್ ಅವರು ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ್ದಾರೆ. ಅವರ ತಂದೆ ಜಿ.ಕೆ. ಸೋಮಶೇಖರ್ ರೈತರು ಮತ್ತು ತಾಯಿ ತೀರ್ಥಾವತಿ ಗೃಹಿಣಿ.

ಮಗನ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ ತಂದೆ ಸೋಮಶೇಖರ್ ಅವರು,

“ನಮ್ಮ ಮಗ ನಮ್ಮೂರಿನ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದ್ದಾನೆ. ಅವನ ಪರಿಶ್ರಮ ಮತ್ತು ದೃಢಸಂಕಲ್ಪವೇ ಈ ಸಾಧನೆಗೆ ಕಾರಣ,” ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ.

ಮನೋಜ್ ಅವರ ಯಶಸ್ಸಿಗೆ ಗ್ರಾಮಸ್ಥರು ಹಾಗೂ ಸ್ನೇಹಿತರು ಅಭಿನಂದನೆ ಸಲ್ಲಿಸುತ್ತಿದ್ದಾರೆ.


ನವೋದಯದಿಂದ NITK ವರೆಗೆ ಶಿಕ್ಷಣ

ಮನೋಜ್ ತಮ್ಮ ಶಾಲಾ ಶಿಕ್ಷಣವನ್ನು ಹಾಸನದ ಮಾವಿನಕೆರೆ ನವೋದಯ ಶಾಲೆಯಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಪೂರ್ಣಗೊಳಿಸಿದರು.

ನಂತರ ಅವರು ಸೂರತ್ಕಲ್‌ನ ಪ್ರತಿಷ್ಠಿತ NITK (National Institute of Technology Karnataka) ಕಾಲೇಜಿನಲ್ಲಿ B.Tech ಪದವಿ ಪಡೆದರು.


ಕೋಚಿಂಗ್ ಇಲ್ಲದೆ ಸ್ವಯಂ ಅಧ್ಯಯನದ ಸಾಧನೆ

B.Tech ಪೂರ್ಣಗೊಳಿಸಿದ ಬಳಿಕ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉತ್ತಮ ಉದ್ಯೋಗದ ಅವಕಾಶ ದೊರೆತಿದ್ದರೂ, ಮನೋಜ್ ಅವರು ಅದನ್ನು ಬದಿಗೊತ್ತಿ ತಮ್ಮ ಕನಸಾದ UPSC ಗುರಿ ಸಾಧಿಸಲು ಮುಂದಾದರು.

ವಿಶೇಷವೆಂದರೆ,

  • ಯಾವುದೇ ಖಾಸಗಿ ಕೋಚಿಂಗ್ ಸೆಂಟರ್‌ಗೆ ಹೋಗಿಲ್ಲ
  • ಬಾಡಿಗೆ ಕೊಠಡಿಯಲ್ಲಿ ವಾಸವಿದ್ದು
  • ಲೈಬ್ರರಿ ಪುಸ್ತಕಗಳ ಅಧ್ಯಯನ
  • ನಿರಂತರ ಅಭ್ಯಾಸ

ಈ ಮೂಲಕ ಅವರು ಈ ಮಹತ್ವದ ಸಾಧನೆ ಮಾಡಿದ್ದಾರೆ.


ಗ್ರಾಮೀಣ ಯುವಕರಿಗೆ ಪ್ರೇರಣೆ

ಗ್ರಾಮೀಣ ಹಿನ್ನೆಲೆಯಿಂದ ಬಂದ ಮನೋಜ್ ಅವರ ಯಶಸ್ಸು ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

ಸರ್ಕಾರಿ ಸೇವೆಗಳಲ್ಲಿ ಸಾಧನೆ ಮಾಡಲು ಕನಸು ಕಾಣುವ ವಿದ್ಯಾರ್ಥಿಗಳಿಗೆ ಅವರ ಕಥೆ ದೃಢಸಂಕಲ್ಪ ಮತ್ತು ಪರಿಶ್ರಮದ ಪ್ರತೀಕವಾಗಿದೆ.