ಅರಕಲಗೂಡು: ಸರ್ಕಾರಿ ಕಚೇರಿಗಳಿಗೆ ವಿನಾಕಾರಣ ಅಲೆದಾಡಿಸುವ ಅಧಿಕಾರಿಗಳ ಪ್ರವೃತ್ತಿಯಿಂದ ಬೇಸತ್ತ ರೈತನೊಬ್ಬ, ಮಾಹಿತಿ ಹಕ್ಕು ಕಾಯ್ದೆಯಡಿ ಗ್ರಾಮ ಪಂಚಾಯತಿಯೊಂದರ ಕಾಮಗಾರಿಗಳಿಗೆ ಸಂಬಂಧಿಸಿದ ಸಾವಿರಾರು ಪುಟಗಳ ದಾಖಲಾತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿದ್ದಾರೆ.
ವಿಶೇಷವೆಂದರೆ ಕಡತಗಳನ್ನು ಪಡೆಯಲು ಶುಲ್ಕಕ್ಕೆ ಹಣ ಹೊಂದಿಸಲು ಒಂದು ಹಸುವನ್ನೇ ಅವರು ಮಾರಾಟ ಮಾಡಿದ್ದಾರೆ. ಕಡೆಗೆ 32 ಸಾವಿರ ಪುಟಗಳ ದಾಖಲಾತಿಗಳನ್ನು ಎತ್ತಿನಗಾಡಿಯಲ್ಲಿ ತುಂಬಿ ಮನೆಗೆ ತಂದಿದ್ದಾರೆ. ಈ ಇಂಟರೆಸ್ಟಿಂಗ್ ಸ್ಟೋರಿ ವಿವರ ಇಲ್ಲಿದೆ ನೋಡಿ.
ಅರಕಲಗೂಡು ತಾಲೂಕು ರಾಮನಾಥಪುರ ಹೋಬಳಿ ಬಸವನಹಳ್ಳಿ ಗ್ರಾಮದ ಬಿ.ಎಸ್.ರವಿ ಎಂಬುವರು ಕಾಳೇನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ನಡೆದಿರುವ ನೂರಾರು ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಯಾಗಿ ಪಿಡಿಒ ಅವರು ನೋಟಿಸ್ ನೀಡಿ ಬೇಕಾದ ದಾಖಲೆಗಳನ್ನು ಪಡೆದುಕೊಳ್ಳಲು ಕಡತಗಳನ್ನು ಪರಿಶೀಲಿಸಲು ತಿಳಿಸಿದ್ದರು. ಅರ್ಜಿದಾರ ಬಯಸಿದ ದಾಖಲೆಗಳು 16370 ಪ್ರಟಗಳು ಇದ್ದಿದ್ದರಿಂದ ಪ್ರತಿ ಕಾಪಿಗೆ 2ರೂ.ನಂತೆ 32340 ರೂ. ಶುಲ್ಕವನ್ನು ಡಿಡಿ ಮೂಲಕ ಪಾವತಿಸಲು ಸೂಚಿಸಿದ್ದರು.
ಅದರನ್ವಯ 16370 ಪ್ರತಿಗಳನ್ನು ಅಂಚೆ ಮೂಲಕ ಪಿಡಿಒ ಒದಗಿಸಿದ್ದರು. ಆ ಬೃಹತ್ ದಾಖಲೆಗಳನ್ನು ಅರ್ಜಿದಾರ ಬಿ.ಎಸ್.ರವಿ ತಮ್ಮ ಎತ್ತಿನಗಾಡಿಯಲ್ಲಿ ತುಂಬಿಕೊಂಡು ಮನೆಗೆ ತಂದಿದ್ದಾರೆ.
ಮಾಹಿತಿ ಹಕ್ಕು ಅರ್ಜಿಯಡಿ ದಾಖಲೆಯ ಶುಲ್ಕ ಪಡೆಯಲು ತಮ್ಮ ಮನೆಯಲ್ಲಿದ್ದ ಒಂದು ಹಸುವನ್ನು ಮಾರಾಟ ಮಾಡಿ 25 ಸಾವಿರ ರೂ. ಹಾಗೂ ಉಳಿಕೆ ಹಣವನ್ನು ಸ್ನೇಹಿತರಿಂದ ಸಾಲವಾಗಿ ಪಡೆದಿದ್ದಾರೆ.
ಆ ದಾಖಲೆಗಳನ್ನು ತಾವು ಕೂಲಂಕಷವಾಗಿ ಪರಿಶೀಲಿಸಲಿದ್ದು, ಯಾವುದಾದರೂ ಅಕ್ರಮ ಕಂಡು ಬಂದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ. ನಾನು ದಾಖಲೆ ಕೋರಿ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಹಿಂಪಡೆಯುವ ಹಲವು ಆಮಿಷಗಳನ್ನು ಒಡ್ಡಲಾಯಿತು. ಅದಕ್ಕೆ ಬಗ್ಗದಿದ್ದಾಗ ನಾನು ದೌರ್ಜನ್ಯ ಎಸಗಿದ್ದೇನೆ ಎಂದು ಆರೋಪಿಸಿ ಕೆಲವು ಗ್ರಾ ಪಂ ಸದಸ್ಯರು ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದಾರೆ.
ಈ ಮೂಲಕ ನನ್ನ ಧ್ವನಿ ತಗ್ಗಿಸಲು ಸಾಧ್ಯವಿಲ್ಲ. ನಾವು ಏನಾದರೂ ದಾಖಲೆ ಕೇಳಿಕೊಂಡು ಕಚೇರಿಗಳಿಗೆ ಹೋದರೆ ಇಲ್ಲದ ನಿಯಮ ಪ್ರಸ್ತಾಪಿಸಿ ನಮ್ಮಂತಹ ಜನಸಾಮಾನ್ಯರನ್ನು ಅಲೆದಾಡಿಸುತ್ತಾರೆ. ಜನರಿಗೆ ತೊಂದರೆ ನೀಡುವವರು ಎಲ್ಲ ನಿಯಮ ಪಾಲಿಸಿದ್ದಾರೆಯೇ ಎನ್ನುವುದನ್ನು ಅರಿಯಲು ಈ ದಾಖಲೆಗಳನ್ನು ಪಡೆದುಕೊಂಡಿದ್ದೇನೆ ಎಂದು ರವಿ ಹೇಳಿದ್ದಾರೆ.










