ಅರಸೀಕೆರೆ: ತಾಲ್ಲೂಕಿನ ಅಗ್ಗುಂದ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆಯ ಕುರಿತು ಮಹತ್ವದ ಹೇಳಿಕೆ ನೀಡಿದರು.
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆಗೆ ಉತ್ತರಿಸುತ್ತಾ,
“ಅವರು ಆಕಾಂಕ್ಷಿ ಅಲ್ಲ, ಅವರು ನಮ್ಮ ನಾಯಕರು. ಶಿವಲಿಂಗೇಗೌಡ ಸೋಲಿಲ್ಲದ ಸರದಾರರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬೇಕೇ ಅಥವಾ ಬೇಡವೇ ಎಂಬುದು ಸಿಎಂ, ಕೆಪಿಸಿಸಿ ಮತ್ತು ಹೈಕಮಾಂಡ್ ತೀರ್ಮಾನಿಸುವ ವಿಷಯ” ಎಂದು ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ಕುರಿತ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಜಾರ್ಜ್,
“ನ್ಯೂಸ್ ಮಾಡೋದು ನಿಮ್ಮ ಹಕ್ಕು. ಆದರೆ ಹೈಕಮಾಂಡ್‌ನಿಂದ ಯಾವುದೇ ಸೂಚನೆ ಬಂದಿದೆಯಾ? ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಏನಾದರೂ ಹೇಳಿದ್ದಾರೆಯೇ? ಹೈಕಮಾಂಡ್ ಹೇಳಿದ ನಂತರವೇ ನಾವು ಮಾತನಾಡಬಹುದು,” ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರ ‘ಐದು ವರ್ಷ ಸಿಎಂ ನಾನು’ ಎಂಬ ಹೇಳಿಕೆಯ ಕುರಿತು ಕೇಳಿದಾಗ ಅವರು,
“ಸಿದ್ದರಾಮಯ್ಯ ಎಂದೂ ‘ನಾನೆ ಸಿಎಂ ಆಗ್ತೇನೆ’ ಎಂದು ಹೇಳಿಲ್ಲ. ನಮ್ಮಲ್ಲಿ ಒಂದು ವ್ಯವಸ್ಥೆ ಇದೆ — ಸಿಎಲ್‌ಪಿ ಸಭೆ ಕರೆಯಲಾಗುತ್ತದೆ, ಹೈಕಮಾಂಡ್ ವೀಕ್ಷಕರನ್ನು ಕಳುಹಿಸುತ್ತದೆ, ಬಳಿಕ ನಿರ್ಧಾರವಾಗುತ್ತದೆ. ಅದೇ ಪ್ರಕ್ರಿಯೆ ಈಗಲೂ ಇದೆ,” ಎಂದರು.
ಸಿಎಲ್‌ಪಿ ಸಭೆ ತಯಾರಿ ನಡೆಯಿತೇ ಎಂಬ ಪ್ರಶ್ನೆಗೆ ಅವರು ನಗುತ್ತಾ,
“ನೀವು ಬುದ್ಧಿವಂತರು… ಎಲ್ಲ ಪ್ರಶ್ನೆಗೂ ಉತ್ತರ ಕೊಡಲು ನನಗೆ ಅಧಿಕಾರ ಇಲ್ಲ. ಅದಕ್ಕೇ ಹೈಕಮಾಂಡ್ ಇದೆ,” ಎಂದು ಹೇಳಿ ಸ್ಪಷ್ಟನೆ ನೀಡುವುದನ್ನು ತಪ್ಪಿಸಿದರು.
ನವೆಂಬರ್ 15ರ ಬಳಿಕ ರಾಹುಲ್ ಗಾಂಧಿ ಕರ್ನಾಟಕ ಭೇಟಿ ಕುರಿತು ಕೇಳಿದಾಗಲೂ ಅವರು,
“ಈ ವಿಷಯಕ್ಕೆ ನಾನು ಉತ್ತರ ನೀಡಲು ಸಾಧ್ಯವಿಲ್ಲ,” ಎಂದಷ್ಟೇ ಹೇಳಿದರು.










