
ಹಾಸನ, ಜೂನ್ 25,(www.kannadapost.com): ಹಾಸನದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭವು ಅದ್ದೂರಿಯಾಗಿ ನಡೆಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಪಥಸಂಚಲನವು ಶಿಸ್ತು, ನಾಯಕತ್ವ ಹಾಗೂ ಜವಾಬ್ದಾರಿಯ ಮಹತ್ವವನ್ನು ಪ್ರತಿಬಿಂಬಿಸಿತು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಆಯ್ಕೆಯಾದ ಶಾಲಾ ನಾಯಕಿಯಾಗಿ ಕು. ಸಾರಿಕಾ ಸಿ.ಕೆ. ಹಾಗೂ ಉಪನಾಯಕರಾಗಿ ಚಿ. ವರುಣ್ ಜಿ.ಬಿ. ಅವರು ಅಧಿಕಾರ ಸ್ವೀಕರಿಸಿ ನಾಯಕತ್ವದ ಹೊಣೆಗಾರಿಕೆಯನ್ನು ವಹಿಸಿಕೊಂಡರು.
ಕಾರ್ಯಕ್ರಮದಲ್ಲಿ ಕೆ.ಸಿ.ಪಿ. ಗ್ರೂಪ್ಸ್‌ನ ವ್ಯವಸ್ಥಾಪಕರು ಹಾಗೂ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಹೆಚ್.ಪಿ. ಕಿರಣ್ ಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ಮೈಸೂರು ವಿಭಾಗದ ಜನಮೆಚ್ಚಿದ ನಾಯಕ 2025 ಪ್ರಶಸ್ತಿಗೆ ಭಾಜನರಾದ ಶ್ರೀ ಕಿರಣ್ ಗೌಡ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ನಾಯಕನು ಶಿಸ್ತು, ಸಮಯಪ್ರಜ್ಞೆ, ಉತ್ತಮ ಭಾಷಾ ಕೌಶಲ್ಯ, ನಡವಳಿಕೆ ಹಾಗೂ ಶೈಕ್ಷಣಿಕ ಸಾಧನೆಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಸಲಹೆ ನೀಡಿದರು.
ಶಾಲೆಯ ವಿವಿಧ ವರ್ಣತಂಡಗಳ ನಾಯಕರಿಗೆ ಬಾವುಟಗಳನ್ನು ವಿತರಿಸಲಾಯಿತು.
ಶಾಲೆಯ ಖಜಾಂಚಿಗಳಾದ ಶ್ರೀಮತಿ ಸಪ್ನ ಕಿರಣ್ ಅವರು ಮಾತನಾಡಿ, ವಿದ್ಯಾರ್ಥಿ ನಾಯಕರು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಹಾಗೂ ಶಾಲೆಯ ನಿಯಮ ಮತ್ತು ಶಿಸ್ತನ್ನು ಪಾಲಿಸುವಲ್ಲಿ ಮುಂದಾಳತ್ವ ವಹಿಸಬೇಕು ಎಂದು ಹೇಳಿದರು.
ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್‌ಗಳನ್ನು ವಿತರಿಸಿ ಶುಭ ಹಾರೈಸಲಾಯಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮತ್ತಷ್ಟು ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.










