“ಚಾರ್ಲಿ 777 “ಹಿಂದಿಕ್ಕಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾದ ಹಾಸನದ ಪ್ರತಿಭೆಗಳ “ದೊಡ್ಡ ಹಟ್ಟಿ ಬೋರೇಗೌಡ”

Dodda Hatti Boregowda, directed by Raghu KM, has won the Best Film award.

ಗೊರೂರು ಶಿವೇಶ್

2021 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ರಘು ಕೆ ಎಂ ನಿರ್ದೇಶನದ ದೊಡ್ಡ ಹಟ್ಟಿ ಬೋರೇಗೌಡ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ . ಚಾರ್ಲಿ 777 ದ್ವಿತೀಯ ಅತ್ಯುತ್ತಮ ಚಿತ್ರದ ಜೊತೆ ಚಿತ್ರದ ನಾಯಕ ರಕ್ಷಿತ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಂದಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಗಡಿ ಪ್ರದೇಶವಾದ ಕೇರಳಾಪುರ ಕಾಳೇನಹಳ್ಳಿ ಸುತ್ತಮುತ್ತ ಚಿತ್ರಣವಾದ ದೊಡ್ಡಟ್ಟಿ ಬೋರೇಗೌಡ ಚಿತ್ರ, ನನ್ನ ಗಮನ ಸೆಳೆಯಲು ಕಾರಣ ನನ್ನ ತಾಯಿಯ ಬಂಧುಗಳೆಲ್ಲ ಆ ಪ್ರದೇಶದಲ್ಲಿ ವಾಸವಿದ್ದಾರೆ. ಅಲ್ಲಿನ ಪ್ರದೇಶ ,ಪ್ರಾದೇಶಿಕ ಭಾಷೆಯನ್ನು ನಿರ್ದೇಶಕರು ಚೆನ್ನಾಗಿ ಬಳಸಿಕೊಂಡಿದ್ದಾರೆ. ನಮ್ಮ ಊರಿಗಿಂತ 30km ದೂರದಲ್ಲಿರುವ ಪ್ರದೇಶದ ಭಾಷಾಭಿನ್ನತೆ ಅಚ್ಚರಿ ಮೂಡಿಸುತ್ತದೆ

ಚಿತ್ರದ ಕಥೆ ತುಂಬಾ ಸರಳ.ಆಶ್ರಯ ಮನೆ ಒಂದನ್ನು ಪಡೆಯಲು ಒಂದು ಕಾಲದಲ್ಲಿ ಚೆನ್ನಾಗಿ ಬದುಕಿ ಬಾಳಿದ ದೊಡ್ಡ ಹಟ್ಟಿ ಬೋರೇಗೌಡ ಪಡುವ ಪಡಿಪಾಟಲು ಚಿತ್ರದ ಕಥೆ. ಬೇರು ಮಟ್ಟದಲ್ಲಿ ಬೇರೂರಿರುವ ಭ್ರಷ್ಟಾಚಾರ ಹಾಗೂ ಆಧುನಿಕ ಗ್ರಾಮೀಣ ಕೌಟುಂಬಿಕ ವ್ಯವಸ್ಥೆ ಸಹಜವಾಗಿ ಚಿತ್ರದಲ್ಲಿ ಮೂಡಿ ಬಂದಿದೆ. ಬೋರೇಗೌಡನ ಕಾಲಿಗೆ ಹೊಕ್ಕ ಮುಳ್ಳನ್ನು ಈ ಭ್ರಷ್ಟತೆಗೆ ರೂಪಕವಾಗಿ ಬಳಸಲಾಗಿದೆ.

ಮದ್ಯಪಾನ ಮತ್ತು ಜೂಜಿ ಗೆ ಗ್ರಾಮ ಸಮುದಾಯ ಸಿಲುಕಿರುವುದನ್ನು ಕೂಡ ಚಿತ್ರ ಪಡಿ ಮೂಡಿಸಿದೆ. ಚಿತ್ರದ ಕಲಾವಿದರೆಲ್ಲರೂ ಸಹಜವಾಗಿ ಅಭಿನಯಿಸಿದ್ದಾರೆ. ಸಿನಿಮಾದ ಕಥಾ ನಿರೂಪಣೆ ತಿಥಿ ಚಿತ್ರದ ಮಾದರಿಯಲ್ಲಿದೆ.ಆದರೆ ತಿಥಿ ಚಿತ್ರಕ್ಕೂ ಈ ಚಿತ್ರಕ್ಕೂ ಒಂದು ವ್ಯತ್ಯಾಸ ಎಂದರೆ ತಿಥಿ ಚಿತ್ರ ಊರಿನ ಪಕ್ಕ ಹರಿಯುವ ನದಿಯ ಹಾಗೆ ಸಹಜವಾಗಿ ಹರಿದರೆ ಅಣೆಕಟ್ಟು ಕಟ್ಟಿ ಆ ನೀರನ್ನು ತಮ್ಮ ಇಷ್ಟಕ್ಕನು ಸಾರವಾಗಿ ಬೇರೆಡೆಗೆ ಹರಿಸುವಂತೆ ಈ ಚಿತ್ರದ ಅಂತ್ಯದಲ್ಲಿ ನಿರ್ದೇಶಕರು ಪ್ರವೇಶಿಸಿ ಅಸಹಜ ಕ್ಲೈಮಾಕ್ಸ್ ತಂದಿದ್ದಾರೆ ಎನಿಸದಿರದು. ಉಳಿದಂತೆ ನಿರ್ದೇಶಕ ಕೆ ಎಂ ರಘು ಪ್ರಯತ್ನ ಶ್ಲಾಘನೀಯ.

ಇದೇ ನಿರ್ದೇಶಕರು ಪರಸಂಗ, ಗಡ್ಡಪ್ಪನ ಸರ್ಕಲ್ ನಿರ್ದೇಶಿಸಿದ್ದಾರೆ. ಕಡಿಮೆ ಬಜೆಟ್ ನ ಇಂಥ ಚಿತ್ರಗಳು ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿವೆ. ಬಹುತೇಕ ಇಂತಹ ಚಿತ್ರಗಳ ನಿರ್ದೇಶಕರು ನಿರೂಪಣಾ ತಂತ್ರವಾಗಿ ಚಿತ್ರವನ್ನು ಬಳಸಿದರೂ ಕಥೆ ಎಷ್ಟು ಮುಖ್ಯ ಎಂಬುದಕ್ಕೆ ತಿಥಿ ಚಿತ್ರ ಮಾದರಿಯಾಗಿದೆ. ಚಿತ್ರ ಯೂಟ್ಯೂಬ್ ನಲ್ಲಿ ಲಭ್ಯವಿದೆ