ಹಾಸನ: ಸೆ.17 ರಂದು ವಿಶ್ವಕರ್ಮ ಜಯಂತಿ ಮಹೋತ್ಸವ

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೆ.17ರಂದು ಜಿಲ್ಲಾ ವಿಶ್ವಕರ್ಮ ಸಮಾಜ ಹಾಗೂ ಹಾಸನ ಜಿಲ್ಲಾಡಳಿತ ಅವರ ಸಂಯುಕ್ತ ಆಶ್ರಯದಲ್ಲಿ ಶ್ರೀ ದೇವಶಿಲ್ಪಿ ವಿಶ್ವಕರ್ಮ ಜಯಂತಿ ಮಹೋತ್ಸವವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್.ವಿ. ಹರೀಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಪ್ರತಿ ವರ್ಷ ಸಾವಿರಾರು ವಿಶ್ವಕರ್ಮ ಸಮಾಜ ಬಾಂಧವರು ಭಾಗವಹಿಸುವ ಜಯಂತಿ ಕಾರ್ಯಕ್ರಮವನ್ನು ಈ ಬಾರಿಯೂ ವೈಭವೋಪೇತವಾಗಿ ಆಚರಿಸಲಾಗುತ್ತಿದೆ.

ಸಮಾಜದ ಸಾಂಸ್ಕೃತಿಕ  ಶಕ್ತಿ, ಪರಂಪರೆ ಮತ್ತು ಏಕತೆ ತೋರಿಸುವ ಮಹೋತ್ಸವ ಇದಾಗಿದೆ ಎಂದು ಹೇಳಿದರು. ಬೆಳಿಗ್ಗೆ8 ಗಂಟೆಗೆ ಪರಮಪೂಜ್ಯ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಶ್ರೀಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ವಿಶ್ವಕರ್ಮ ಹೋಮ. ಬೆಳಿಗ್ಗೆ 9.3೦ಕ್ಕೆ ಡಿಸಿ ಕಚೇರಿ ಆವರಣದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ನಂತರ ವಿಶ್ವಕರ್ಮ ವೃತ್ತದಿಂದ ಕಲಾಭವನದವರೆಗೆ ಭವ್ಯ ಮೆರವಣಿಗೆ.ಬೆಳಿಗ್ಗೆ11.30ಕ್ಕೆ ಕಲಾಭವನದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ಪುಪ್ಪಗಿರಿ ಮಠದ ಪರಮಪೂಜ್ಯ ಶ್ರೀ ಸೋಮಶೇಖರ ಶಿವಾಚಾರ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ವಿಶ್ವಕರ್ಮ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ನಡೆಯಲಿದೆ. ಜೊತೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಅಪರಾಹ್ನ ಪ್ರೊ. ಕೃಷ್ಟೇಗೌಡ ಅವರಿಂದ ನಗೆಹಬ್ಬ ಏರ್ಪಡಿಸಲಾಗಿದೆ ಎಂದರು. ಈ ಬಾರಿಯ ಜಯಂತಿಯನ್ನು ನಗರ ಹಾಗೂ ಜಿಲ್ಲೆಯಾದ್ಯಂತ ಸಮಾಜದ ಏಕತೆ ತೋರಿಸುವ ಭವ್ಯ ಸಮಾರಂಭವನ್ನಾಗಿ ರೂಪಿಸಲಾಗುತ್ತಿದೆ. ಸಮಾಜದ ಎಲ್ಲಾ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸಮಾಜದ ಉಪಾಧ್ಯಕ್ಷ ಎ.ಸಿ. ನಾರಾಯಣ್, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕುಮಾರ್, ಉಪಾಧ್ಯಕ್ಷ ಕೆ.ವಿ. ಯೋಗೀಶ್, ತಾಲೂಕು ಉಪಾಧ್ಯಕ್ಷ ಬ್ಯಾಟರಂಗಚಾರ್, ಖಜಾಂಚಿ ಕೆ.ಎಸ್. ಜಗದೀಶ್ ಇದ್ದರು.