ಹಾಸನ: ಆದಾಯಕ್ಕಿಂತ ಭಕ್ತರ ಸಂತೋಷವೇ ಮುಖ್ಯ: ಹಾಸನಾಂಬ ಜಾತ್ರಾ ಸಿದ್ಧತೆ ವೇಳೆ ಸಚಿವ ಕೃಷ್ಣಬೈರೇಗೌಡ ಸ್ಪಷ್ಟನೆ”

District in-charge Minister Krishna Byre Gowda clarified that it doesn't matter if the annual income is low, the happiness of the devotees is our only value.

ಹಾಸನ: ಈ ವರ್ಷ ಆದಾಯ ಕಡಿಮೆ ಆದ್ರೂ ಪರವಾಗಿಲ್ಲ, ಭಕ್ತರ ಸಂತೋಷವೇ ನಮ್ಮ ಸಾರ್ಥಕತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದರು.

ದುಡ್ಡು ಬಂದರೆ ಗೌರವದಿಂದ ಸ್ವೀಕರಿಸುತ್ತೇವೆ, ಆದರೆ ಆದಾಯ ಶೂನ್ಯವಾದರೂ ಪರವಾಗಿಲ್ಲ. ಲಾಡು ಖರ್ಚು ನಮ್ಮ ಮೇಲೆ ಬಂದರೂ ಪರವಾಗಿಲ್ಲ. ಅನುಕೂಲಸ್ಥರೂ ಧರ್ಮದರ್ಶನ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ಇದು ಧರ್ಮದ ಶ್ರೇಷ್ಠತೆ. ಬದಲಾವಣೆ ತಂದಾಗ ಆತಂಕ ಇರುತ್ತದೆ, ಆದರೆ ಭಕ್ತರ ಸಂತೋಷ ನಮ್ಮ ಸಾರ್ಥಕತೆ ಎಂದು ಸಚಿವರು ತಿಳಿಸಿದ್ದಾರೆ.

ದೇವಸ್ಥಾನದ ನಿರ್ವಹಣೆಗಾಗಿ ಸರ್ಕಾರದ ಹಣದ ಅವಲಂಬನೆ ಬೇಡ, ಸಾರ್ವಜನಿಕರ ದೇಣಿಗೆಯಿಂದ ದೇವಸ್ಥಾನ ನಡೆಯುವುದು ನಮಗೆ ಹೆಮ್ಮೆ ಎಂದೂ ಹೇಳಿದರು.

ಹಾಸನಾಂಬ ಜಾತ್ರಾ ಮಹೋತ್ಸವದ ಭಾಗವಾಗಿ ಸಚಿವ ಕೃಷ್ಣಬೈರೇಗೌಡ ಇಂದು ದೇವಿ ದರ್ಶನಕ್ಕೆ ಆಗಮಿಸಿ ದೇವಾಲಯದ ಸುತ್ತಮುತ್ತಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಧರ್ಮದರ್ಶನ ಹಾಗೂ ₹ 300 ವಿಶೇಷ ದರ್ಶನದ ಸಾಲುಗಳನ್ನು ತಪಾಸಣೆ ಮಾಡಿದ ಅವರು, ಭಕ್ತರ ಅನುಭವವನ್ನು ನೇರವಾಗಿ ವಿಚಾರಿಸಿದರು.

ಸಚಿವರ ಭೇಟಿಯ ವೇಳೆ ಜಿಲ್ಲಾಡಳಿತದ ಕಾರ್ಯಪಟುತೆ ಹಾಗೂ ದೇವಾಲಯದ ನಿರ್ವಹಣೆಯ ಬಗ್ಗೆ ಭಕ್ತರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ಕೃಷ್ಣಬೈರೇಗೌಡ ಅವರು ದೇವಾಲಯದ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಿನ್ನೆ ಸುಮಾರು 65 ಸಾವಿರ ಭಕ್ತರು ದೇವಿ ದರ್ಶನ ಪಡೆದಿದ್ದರು. ಇಂದು ಈಗಾಗಲೇ 91 ರಿಂದ 92 ಸಾವಿರ ಮಂದಿ ಅರ್ಧ ದಿನದಲ್ಲೇ ದರ್ಶನ ಪಡೆದಿದ್ದಾರೆ.

ನಾಳೆ ಮುಂಜಾನೆ 2 ಗಂಟೆಯವರೆಗೆ ದರ್ಶನ ಮುಂದುವರಿಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದು ನಮಗೆ ಸಂತೋಷ. ಮಧ್ಯಾಹ್ನ 1 ಗಂಟೆಗೆ ಬಂದವರು ಹದಿನೈದು ನಿಮಿಷಗಳಲ್ಲಿ ದರ್ಶನ ಪಡೆದಿದ್ದಾರೆ. ₹1000 ವಿಶೇಷ ದರ್ಶನ ಎರಡು-ಮೂರು ನಿಮಿಷಗಳಲ್ಲಿ, ₹300 ದರ್ಶನ ಹತ್ತು ನಿಮಿಷಗಳಲ್ಲಿ ಮುಗಿಯುತ್ತಿದೆ.

ಹಿಂದಿನ ವರ್ಷಗಳಲ್ಲಿ ಆರು ಗಂಟೆಗೂ ಹೆಚ್ಚು ಕಾಲ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಈ ಬಾರಿ ಸರತಿ ಸಾಲು ಸರಾಗವಾಗಿ ಸಾಗುತ್ತಿದೆ. ಸಾಮಾನ್ಯ ಭಕ್ತರಿಗೆ ಉತ್ತಮ ಅನುಭವ ದೊರಕುತ್ತಿದೆ. ಸ್ಥಳೀಯರಿಗೂ ಆರಾಮದಾಯಕ ದರ್ಶನ ಸಿಕ್ಕಿದೆ. ನಾವು ತಂದಿರುವ ಬದಲಾವಣೆಗಳು ಭಕ್ತರಿಗೆ ಅನುಕೂಲವಾಗಿದೆ ಎಂದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅಕ್ಟೋಬರ್ 15ರಂದು ದೇವಿ ದರ್ಶನಕ್ಕೆ ಆಗಮಿಸಲಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಮಯ ನಿಗದಿ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಸಿಎಂ ಹಾಗೂ ಡಿಸಿಎಂಗೆ ನಾನು ಸ್ವತಃ ಮನವಿ ಮಾಡುತ್ತೇನೆ.

ಸೋಮವಾರದಿಂದ ಶುಕ್ರವಾರದವರೆಗೆ ಭಕ್ತರ ಸಂಖ್ಯೆ ಕಡಿಮೆ ಇರಬಹುದು. ಅಕ್ಟೋಬರ್ 18 ರಿಂದ 22ರವರೆಗೆ 2 ಲಕ್ಷಕ್ಕೂ ಹೆಚ್ಚು ಭಕ್ತರ ಆಗಮನ ನಿರೀಕ್ಷೆ ಇದೆ. ಸಾಧ್ಯವಾದರೆ ಅಕ್ಟೋಬರ್ 18ರ ಒಳಗಾಗಿ ದರ್ಶನ ಪಡೆದು ಹೋಗಲು ಮನವಿ ಮಾಡಿದರು.