ಹಾಸನ, ಏ.13: ಜಾತಿಗಣತಿ ವರದಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ವಿರೋಧದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಇಂದು ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಷಯವನ್ನು ಏಪ್ರಿಲ್ 17ರಂದು ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಏಕೈಕ ವಿಷಯವಾಗಿ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
“ಜಾತಿಗಣತಿಯ ವಿರೋಧದ ಬಗ್ಗೆ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದರೆ, ಆ ಅಂಶಗಳನ್ನು ಪರಿಶೀಲಿಸಲಾಗುವುದು. ಸ್ವಾಮೀಜಿಗಳ ಬಳಿ ಇವರಿಗೆ ಅಂಕಿ ಸಂಖ್ಯೆ ಲಭ್ಯವಿತ್ತೇ? ಈಗ ಸ್ವಾಮೀಜಿಗಳು ಮಾತ್ರವಲ್ಲ, ಪ್ರತಿಯೊಬ್ಬರೂ ಈ ವರದಿಯನ್ನು ಪರಾಮರ್ಶಿಸಬಹುದು.
ಆದರೆ, ಈಗಲೇ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಸಚಿವ ಸಂಪುಟದ ಚರ್ಚೆಯ ನಂತರ ಬರುವ ಅಭಿಪ್ರಾಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಸಚಿವ ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ವಿರೋಧ ಪಕ್ಷ ಬಿಜೆಪಿಯ ವಿರೋಧ ಕುರಿತು ಪ್ರತಿಕ್ರಿಯಿಸಿದ ಅವರು, “ಬಿಜೆಪಿಯವರಿಗೆ ಏನು ಗೊತ್ತಿದೆ? ವಿರೋಧ ಪಕ್ಷದವರು ನಾವು ಮಾಡಿದ್ದೆಲ್ಲವನ್ನೂ ಸರಿ ಎಂದು ಒಪ್ಪಿಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುವುದಿಲ್ಲ. ಆದರೆ, ಮರುಪರಿಶೀಲನೆಯ ಅಗತ್ಯವಿದ್ದರೆ, ಆ ಬಗ್ಗೆಯೂ ಚಿಂತನೆ ನಡೆಸಬಹುದು,” ಎಂದಿದ್ದಾರೆ.
ಜಾತಿಗಣತಿಯ ವರದಿಯನ್ನು ಈಗಾಗಲೇ ಸಚಿವ ಸಂಪುಟದ ಮುಂದೆ ಮಂಡಿಸಲಾಗಿದ್ದು, ಏ.17ರ ಸಭೆಯಲ್ಲಿ ಈ ಕುರಿತು ಸಮಗ್ರ ಚರ್ಚೆ ನಡೆದ ನಂತರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಒತ್ತಿ ಹೇಳಿದರು.










