ಯುವ ಜನಾಂಗ ದುಶ್ಚಟಗಳಿಂದ ದೂರವಿರಬೇಕು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರಕಾಶ್

ಅರಕಲಗೂಡು: ಯುವ ಜನಾಂಗ ದುಶ್ಚಟಗಳಿಂದ ದೂರವುಳಿದರೆ ಭವಿಷ್ಯದ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರಕಾಶ್ ಮೊಗವೀರ್ ಸಲಹೆ ನೀಡಿದರು.

ತಾಲೂಕಿನ ಹೊನ್ನವಳ್ಳಿ ಹೇಮಾವತಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಸವಾ ವಲಯದ ಸೋಮನಹಳ್ಳಿ ಕಾರ್ಯಕ್ಷೇತ್ರದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಲ್ಲಿ ಓದಿಗೆ ಹೆಚ್ಚಿನ ಮಹತ್ವ ನೀಡಬೇಕು. ದುಶ್ಚಟ ದುರಾಭ್ಯಾಸಗಳತ್ತ ಚಿತ್ತ ಹರಿಸದೆ ಉತ್ತಮ ನಡೆ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಧನಪಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಮಂಜುನಾಥ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಸ್ವಪ್ನ, ಸ್ವಾತಿ, ಸೇವಾ ಪ್ರತಿನಿಧಿ ಬೇಬಿ, ಅಶ್ವಿನಿ ಇತರರಿದ್ದರು.