ಹಾಸನ: ಆಳುವ ಸರ್ಕಾರಗಳ ವಿವಿಧ ಜನ, ರೈತ, ಕಾರ್ಮಿಕ ವಿರೋಧಿ ನೀತಿ ಕುರಿತು ಬರುವ ನ.13ರಿಂದ 15 ವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಸಿಐಟಿಯುನ16 ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 10ವರ್ಷಗಳ ಅವಧಿಯಲ್ಲಿ ದೊಡ್ಡ ಪ್ರಮಾಣದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭಾರತ ಯಾರ ಜೊತೆಗೆ ವ್ಯಾಪಾರ ಮಾಡಬೇಕು ಎಂಬುದನ್ನು ಅಮೆರಿಕ ತೀರ್ಮಾನ ಮಾಡುವ ರಾಜಕೀಯ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಆತಂಕ ಹೊರ ಹಾಕಿದರು.
ಭಾರತದಲ್ಲಿ ಹೈನುಗಾರಿಕೆ ಸೇರಿದಂತೆ ಇತರೆ ಕೃಷಿ ಉತ್ಪನ್ನಗಳ ಮೇಲೆ ತೀವ್ರತರ ದಾಳಿ ಆರಂಭವಾಗಿ, ಇವುಗಳ ಮೇಲೆ ಅವಲಂಬಿತ ವಾಗಿರುವ ಗ್ರಾಮೀಣ ಉದ್ಯೋಗ ಕುಸಿದು, ನಿರುದ್ಯೋಗ ಪ್ರಮಾಣ ತೀವ್ರವಾಗಿ ಹೆಚ್ಚಳವಾಗುತ್ತಿದೆ ಎಂದರು.
ದೇಶದ ಕೃಷಿ ಬಿಕ್ಕಟ್ಟಿಗೆ ಸಿಲುಕಿದ್ದು ಅವೈಜ್ಞಾನಿಕ ಭೂಸ್ವಾಧೀನದಿಂದಾಗಿ ಕೃಷಿ ನಂಬಿರುವ ರೈತರು ಮತ್ತು ಕೃಷಿ ಕೂಲಿಕಾರರನ್ನು ಗ್ರಾಮೀಣ ಪ್ರದೇಶದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಕಾರ್ಯ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದರಿಂದ ದೇಶದಲ್ಲಿ ಬಡತನ ಹೆಚ್ಚಳವಾಗುತ್ತಿದ್ದು ನಿರುದ್ಯೋಗ ಪ್ರಮಾಣ ತೀರ್ವವಾಗುತ್ತಿದೆ ಎಂದು ಆತಂಕ ಹೊರ ಹಾಕಿದರು.
ರಾಜ್ಯ ಸರ್ಕಾರವೂ ಸಾಮಾಜಿಕ ನ್ಯಾಯ ಕಾಪಾಡುವ ರೀತಿಯ ನೀತಿಗಳನ್ನು ಜಾರಿಗೆ ತರಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಎಲ್ಲಾ ಇಲಾಖೆಗಳಲ್ಲೂ ಗುತ್ತಿಗೆ ಕಾರ್ಮಿಕರ ಪ್ರಮಾಣ ಹೆಚ್ಚಳವಾಗುತ್ತಿದೆ. ಸರ್ಕಾರಗಳು ಸಾರ್ವಜನಿಕ ವಿತರಣಾ ವ್ಯವಸ್ಥೆ, ಶಿಕ್ಷಣ, ಆರೋಗ್ಯ ದಂತಹ ಸಾರ್ವಜನಿಕ ಕ್ಷೇತ್ರಗಳಿಗೆ ಹಣ ತೊಡಗಿಸದೆ ಜನರ ಸಂಕಷ್ಟ ನಿವಾರಿಸಲು ಸಾಧ್ಯವಾಗುವುದಿಲ್ಲ. ದುಡಿಯುವ ಜನರ ಕೊಂಡುಕೊಳ್ಳುವ ಶಕ್ತಿ ಕಡಿಮೆಯಾಗುತ್ತಿರುವಾಗ ಕಾರ್ಪೊರೇಟ್ ಕಂಪನಿಗಳ ಲಾಭ ಹೆಚ್ಚಾಗುತ್ತಿದೆ.
ಇದರ ಆರ್ಥಿಕ ನೀತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು. ಸರ್ಕಾರಿ ಖನಿಜ ಸಂಪತ್ತನ್ನ ಖಾಸಗೀಕರಣ ಮಾಡುವುದು, ಸರ್ಕಾರಿ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಿಸುತ್ತಿದೆ. ಬಂಡವಾಳ ದಾರರಿಗೆ ರಿಯಾಯಿತಿ ಘೋಷಿಸುತ್ತಿದೆ ಎಂದು ದೂರಿದರು.
ಕನಿಷ್ಟ ವೇತನವನ್ನು ವೈಜ್ಞಾನಿಕವಾಗಿ ನಿಗದಿ ಮಾಡಲು ಸಾಧ್ಯವಾಗಬೇಕು. ಸುಪ್ರೀಂಕೋರ್ಟ್ ತೀರ್ಪಿನಂತೆ ಅಕುಶಲ ಕಾರ್ಮಿಕರಿಗೆ ಕನಿಷ್ಟ 31ಸಾವಿರ ವೇತನ ನಿಗದಿ ಮಾಡಬೇಕು. ಇಂತಹ ಜನಪರ ನೀತಿಗಳನ್ನು ಜಾರಿಗೆ ತಂದರೆ ಕೈಗಾರಿಕಾ ಅಭಿವೃದ್ಧಿ ಸಾರ್ವತ್ರಿಕವಾಗಿ ನಡೆಯುತ್ತದೆ.
ಬೆಂಗಳೂರು ಕೇಂದ್ರತ ಅವೈಜ್ಞಾನಿಕ ಅಭಿವೃದ್ಧಿ ಕಲ್ಪನೆ ಬಿಟ್ಟು ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸೂಕ್ತ ಗಮನ ಕೊಡಲು ಸರ್ಕಾರ ಮುಂದಾಗಬೇಕು. ಬೆಂಗಳೂರಿನ ಸುತ್ತಮುತ್ತಲು ನಡೆಸುತ್ತಿರುವ ವ್ಯಾಪಕ ಭೂಸ್ವಾಧೀನ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಇಲ್ಲದಂತೆ ಮಾಡುತ್ತದೆ. ಕೈಗಾರಿಕೆ ಸ್ಥಾಪಿಸಲು ಕೃಷಿ ಯೋಗ್ಯ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು ಎಂದರು.
ಈ ಎಲ್ಲವುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಿದ್ದೇವೆ. ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ.ಹೇಮಲತಾ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ಕಾರ್ಯದರ್ಶಿ ಕೆ.ಎನ್.ಉಮೇಶ್ ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಆಯ್ದ 450 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಉಪಾಧ್ಯಕ್ಷ ಜಿ.ಪಿ.ಸತ್ಯನಾರಾಯಣ, ಖಜಾಂಚಿ ಅರವಿಂದ ಇದ್ದರು.










