ನುಗ್ಗೇಹಳ್ಳಿ : ಪೋಷಕರು ತಮ್ಮ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣಕ್ಕಿಂತ ಅಂಕಗಳ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಈ ಬಗ್ಗೆ ಪೋಷಕರು ತಮ್ಮ ಮಕ್ಕಳ ಮನಸ್ಥಿತಿ ಅರಿಯಬೇಕಾಗಿದೆ ಎಂದು ಚನ್ನರಾಯಪಟ್ಟಣ ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ. ಯುವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹೋಬಳಿ ಕೇಂದ್ರದ ಪಿ ಎಚ್ ದೇಶಪಾಂಡೆ ಪಬ್ಲಿಕ್ ಸ್ಕೂಲ್ ವತಿಯಿಂದ 2025-26ನೇ ಸಾಲಿನ ಹೊಯ್ಸಳ ಉತ್ಸವ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಿಕರ ಕಾಲದಲ್ಲಿ ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು ಗುರುಕಲದಲ್ಲಿ ಪಾಠ ಹೇಳಿಕೊಡುವುದರ ಜೊತೆಗೆ ಸಂಸ್ಕೃತಿ ಧರ್ಮ ಯೋಗದ ಜೊತೆಗೆ ಮಾನವೀಯ ಮೌಲ್ಯಗಳ ಬಗ್ಗೆ ಹೆಚ್ಚಾಗಿ ಹೇಳಿಕೊಡಲಾಗುತ್ತಿತ್ತು ಇದರಿಂದ ಅವರು ತಂದೆ ತಾಯಿ ಅಜ್ಜಿ ತಾತಂದಿರು ಸೇರಿದಂತೆ ಗುರು ಹಿರಿಯರನ್ನು ಮಕ್ಕಳು ಹೆಚ್ಚು ಗೌರವಿಸುತ್ತಿದ್ದರು ಇಂದಿನ ವೈಜ್ಞಾನಿಕ ಸ್ಪರ್ಧ ಶಿಕ್ಷಣ ಯುಗದಲ್ಲಿ ಎಲ್ಲವೂ ಮಾಯವಾಗಿ ಸಂಬಂಧಗಳನ್ನೇ ಮರೆಯುವಂತೆ ಆಗಿದೆ ಈ ಬಗ್ಗೆ ಎಲ್ಲರೂ ಚಿಂತಿಸುವ ಅಗತ್ಯವಿದೆ ಎಂದರು.
ಹೋಬಳಿ ಕೇಂದ್ರದಲ್ಲಿ ಕಳೆದ 16 ವರ್ಷಗಳಿಂದ ಪಿ ಎಚ್ ದೇಶಪಾಂಡೆ ಪಬ್ಲಿಕ್ ಸ್ಕೂಲ್ ವತಿಯಿಂದ ಈ ಭಾಗದ ಮಕ್ಕಳಿಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ಕೊಡಲಾಗುತ್ತಿದೆ ಶಾಲೆಯಲ್ಲಿ ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ವಿಶೇಷವಾಗಿ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಹೋಬಳಿ ಕೇಂದ್ರದ ಆರೋಗ್ಯ ಕೇಂದ್ರದಲ್ಲಿ ಸುಮಾರು 10 ವರ್ಷಗಳ ಕಾಲ ಈ ಭಾಗದ ಜನರ ಸೇವೆ ಮಾಡಿದ್ದೇನೆ ನಮ್ಮ ಹಾಗೂ ಈ ಭಾಗದ ಜನರ ಒತ್ತಾಯದಿಂದ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಪ್ರಸ್ತುತ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಎನ್ ದೀಪ ಮಾತನಾಡಿ, ಜಿಲ್ಲೆಯಲ್ಲಿ ವಯಸ್ಕರ ಗರ್ಭಿಣಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಮಕ್ಕಳ ಪೋಷಕರು ಹಾಗೂ ಖಾಸಗೀ ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರು ಆಡಳಿತ ಮಂಡಳಿ ಸದಸ್ಯರು ಎಚ್ಚರ ವಹಿಸುವುದು ಸೂಕ್ತವಾಗಿದೆ ಈ ಬಗ್ಗೆ ಉದಾಸೀನ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ತಾಲೂಕಿನಲ್ಲಿ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಮಾರಾಟದಿಂದ ವಿದ್ಯಾರ್ಥಿಗಳ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ ಒಂದು ಬಾರಿ ಈ ವ್ಯಸನಕ್ಕೆ ಒಳಪಟ್ಟರೆ ಮತ್ತೆ ಅವರನ್ನು ಈ ಚಟದಿಂದ ಬಿಡಿಸುವುದು ಕಷ್ಟವಾಗುತ್ತದೆ ಈ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಪಿಎಚ್ ದೇಶಪಾಂಡೆ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಶಶಿಕಲಾ ಎನ್ ಎಲ್ ಮಂಜುನಾಥ್ ಮಾತನಾಡಿ, ಈ ಭಾಗದ ಮಕ್ಕಳಿಗೆ ಕಳೆದ 16 ವರ್ಷಗಳಿಂದ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಕೊಡಲಾಗುತ್ತಿದೆ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕ್ರೀಡೆ ಸೇರದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಚ್ಚಿನ ತರಬೇತಿ ನೀಡುವ ಮೂಲಕ ಸ್ಪರ್ಧಾ ಭಾವನೆ ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.
ಹೊಯ್ಸಳ ಉತ್ಸವದ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಶಾಲೆಯ ಮುಂಭಾಗದಿಂದ ವೀರಭದ್ರ ಜನಪದ ಕುಣಿತದೊಂದಿಗೆ ವೇದಿಕೆಗೆ ಕರೆತರಲಾಯಿತು.
2025-26ನೇ ಸಾಲಿನಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಜೊತೆಗೆ ಮಕ್ಕಳು ವಿವಿಧ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಪೋಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕ್ರೀಡಾಧಿಕಾರಿ ಕೆ ಟಿ ಆನಂದ್, ಹೋಬಳಿ ಶಿಕ್ಷಣ ಸಂಯೋಜಕ ಕರಿಯಪ್ಪ ಗೌಡ, ಬಿ ಆರ್ ಪಿ ಶ್ರೀಕಾಂತ್, ಸಿಆರ್‌ಪಿ ಮಂಜೇಗೌಡ, ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ವಾಸು, ಸರೋಜ ಕೆಂಪರಾಜು, ಕನಕಲತಾ ರವೀಶ್, ಉಷಾರಾಜು, ಚಿನ್ಮಯ್, ಚಿರಾಗ್, ನಾಗರತ್ನ, ವಿಶ್ವಾಸ್, ಪ್ರಮುಖರಾದ ರೋಜಾ, ರೇಷ್ಮಾ, ಶಾಲೆಯ ಮುಖ್ಯ ಶಿಕ್ಷಕ ಜೆ ಎಲ್ ರವಿ, ಪೋಷಕರು ಮಕ್ಕಳು ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.
Children are under pressure as parents are giving more emphasis on grades-based education than value-based education for their children.










