ಬೆಂಗಳೂರು : ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರವಾಸ ಕೈಗೊಂಡ ಮುತ್ತಿಗೆಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳು, ಜೀವನದಲ್ಲಿ ಮರೆಯಲಾಗದ ಅನುಭವವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿ, ಆಕಾಶದಲ್ಲಿ ಹಾರಿದ ಕ್ಷಣಗಳ ಸಂಭ್ರಮವು ಮಕ್ಕಳ ಮುಖದ ಮೇಲೆ ಕಂಡ ಖುಷಿಯಲ್ಲೇ ಸ್ಪಷ್ಟವಾಗಿ ಪ್ರತಿಬಿಂಬಿಸಿತು. ಬೆಂಗಳೂರಿಗೆ ವಿಮಾನದಲ್ಲಿ ತೆರಳಿ, ಅಲ್ಲಿಂದ ಬಸ್ ಮೂಲಕ ಹಿಂತಿರುಗುವ ರೀತಿಯಲ್ಲಿ ಈ ವಿಶಿಷ್ಟ ಪ್ರವಾಸವನ್ನು ಯೋಜಿಸಲಾಗಿತ್ತು.
ಈ ಅಪರೂಪದ ಅನುಭವಕ್ಕೆ ಶಿಕ್ಷಕರು, ಪೋಷಕರು, ದಾನಿಗಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅವರ ಸಹಕಾರವೇ ಶಕ್ತಿ. ಮಕ್ಕಳಿಗೆ ಪಠ್ಯ ಪುಸ್ತಕಗಳ ಜ್ಞಾನಕ್ಕಷ್ಟೇ ಸೀಮಿತವಲ್ಲದೆ, ಜೀವನದ ಅನುಭವವೂ ಅಗತ್ಯ ಎಂಬ ಉದ್ದೇಶದಿಂದಲೇ ಈ ಪ್ರವಾಸವನ್ನು ಆಯೋಜಿಸಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳು ಎಂದರೆ ಹಿಂದುಳಿದವೆಂಬ ಸಾಮಾನ್ಯ ಧೋರಣೆಗೆ ಮುತ್ತಿಗೆಪುರದ ಈ ಶಾಲೆ ತನ್ನ ಕಾರ್ಯದಿಂದಲೇ ಗಟ್ಟಿಯಾದ ಸವಾಲು ಹಾಕಿದೆ. ‘ಸರ್ಕಾರಿ ಶಾಲೆ ಅಂದ್ರೆ ಸುಮ್ನೇನಾ?’ ಎಂಬ ಪ್ರಶ್ನೆಗೆ ಈ ಶಾಲೆ ತನ್ನ ಸಾಧನೆಗಳ ಮೂಲಕವೇ ಸ್ಪಷ್ಟ ಉತ್ತರ ನೀಡಿದೆ.
ಈ ಹಿಂದೆ ಕೊಪ್ಪಳ ಜಿಲ್ಲೆಯ ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರು ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳನ್ನು ಜಿಂದಾಲ್ ಏರ್‌ಪೋರ್ಟ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದು ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಬಿಸಿಯೂಟ ಅಡುಗೆ ತಯಾರಕರೊಂದಿಗೆ ಒಟ್ಟು 40 ಮಂದಿ ವಿಮಾನ ಪ್ರಯಾಣ ಮಾಡಿದ್ದರು.
ಒಟ್ಟಾರೆ, ಖಾಸಗಿ ಶಾಲೆಗಳಿಗೂ ಅಚ್ಚರಿ ಮೂಡಿಸಿದ ಮುತ್ತಿಗೆಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಈ ವಿಮಾನ ಪ್ರವಾಸ, ಸರ್ಕಾರಿ ಶಾಲೆಗಳ ಸಾಮರ್ಥ್ಯ ಮತ್ತು ಕನಸುಗಳಿಗೆ ಹೊಸ ಅರ್ಥ ನೀಡಿದೆ. ಕಾಫಿನಾಡಿನ ಕುಗ್ರಾಮದಿಂದ ಹಾರಿದ ಈ ಪುಟ್ಟ ಕನಸುಗಳು, ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೇರಲಿ ಎಂಬುದೇ ಎಲ್ಲರ ಹಾರೈಕೆ.










