CHIKKAMAGALURU:ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಮೇಲೆ ನುಗ್ಗಿದ ಕಾರು; 7 ವರ್ಷದ ಬಾಲಕಿ ಸಾವು- ಕಾರು ಪಲ್ಟಿ‌ ಮಾಡಿ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ್ರು

ಮದ್ಯಪಾನಿ ಚಾಲಕನ ಅಜಾಗರೂಕತೆ ಆರೋಪ; 7 ಮಂದಿಗೆ ಗಂಭೀರ ಗಾಯ

(Chikkamagaluru)ಚಿಕ್ಕಮಗಳೂರು ಜಿಲ್ಲೆಯ ಬಿಳೇಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆಯ ವೇಳೆ ಕಾರು ನುಗ್ಗಿ 7 ವರ್ಷದ ಬಾಲಕಿ ಸಾವನ್ನಪ್ಪಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

Chikkamagaluru|ಚಿಕ್ಕಮಗಳೂರು, ಏಪ್ರಿಲ್ 14:(kannadapost.com)ಅಂಬೇಡ್ಕರ್ ಜಯಂತಿ ಮೆರವಣಿಗೆಯ ಮೇಲೆ  ನುಗ್ಗಿದ ಕಾರು 7 ವರ್ಷದ ಬಾಲಕಿಯನ್ನು ಬಲಿ ಪಡೆದಿರುವ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲು ಗ್ರಾಮದಲ್ಲಿ‌ ಕಳೆದ ರಾತ್ರಿ ನಡೆದಿದೆ.

ಮದ್ಯಪಾನದ ನಶೆಯಲ್ಲಿ ಇದ್ದನೆಂದು ಆರೋಪಿಸಲಾದ ಕಾರು ಚಾಲಕ ಸುಧಾಕರ್, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಕಾರು ಹರಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ 7 ವರ್ಷದ ಸಾನ್ವಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳಾದ 11 ವರ್ಷದ ನಿಶ್ಚಿತ್-ತೃಪ್ತಿ, ತಿಮ್ಮರಾಜು, ಉಷಾ, ಚೇತನ್, ಸೃಷ್ಠಿ ಹಾಗೂ ನಾಗರಾಜ್ ಅವರನ್ನು ತಕ್ಷಣ ಹಾಸನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತವಾದ ತಕ್ಷಣ ಸ್ಥಳೀಯರು ಕಾರು ಚಾಲಕ ಸುಧಾಕರ್ ಅವರನ್ನು ಹಿಡಿದು ಥಳಿಸಿದ್ದಾರೆ. ಇದರಿಂದ ಆತನಗೂ ಗಾಯಗೊಂಡಿದ್ದಾನೆ. ಇದೇ ವೇಳೆ ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿ ಪರಾರಿಯಾಗಿದ್ದಾನೆ.

ಆಕ್ರೋಶಗೊಂಡ ಜನರು ಕಾರಿನ ಗಾಜುಗಳನ್ನು ಪುಡಿ-ಪುಡಿಯಾಗಿಸಿದ್ದು, ಕಾರನ್ನು ಪಲ್ಟಿ ಮಾಡಿದರು. ಇದರಿಂದ  ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಗಾಯಗೊಂಡ ಚಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ನಂತರ, ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಯತ್ನಿಸಿದರೆಂಬ ಆರೋಪವೂ ಕೇಳಿಬಂದಿದೆ. “ಚಾಲಕ ಚೆನ್ನಾಗಿದ್ದಾನೆ, ಗಾಯಾಳುಗಳ ಕಡೆ ಗಮನ ಹರಿಸಿ” ಎಂದು ಆಕ್ರೋಶಿತರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.

ಸ್ಥಿತಿಗತಿಯನ್ನು ನಿಯಂತ್ರಿಸಲು 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಪೊಲೀಸರು ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಆಕ್ರೋಶಿತರು ಪೊಲೀಸರ ಮಾತಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಎಎಸ್ಪಿ ಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.

ಈ ವೇಳೆ ಮೃತ ಬಾಲಕಿಯ ಪೋಷಕರು ಎಎಸ್ಪಿ ಮುಂದೆ ಆಕ್ರಂದನ ವ್ಯಕ್ತಪಡಿಸಿದ ದೃಶ್ಯ ಮನಕಲಕುವಂತಿತ್ತು. ಜನರನ್ನು ಶಾಂತಗೊಳಿಸಲು ಎಎಸ್ಪಿ ಕೈಮುಗಿದು ಮನವಿ ಮಾಡಿದ ನಂತರ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.

ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.