ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಎಂಎಲ್‌ಸಿ ಡಾ. ಯತೀಂದ್ರ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ತಂದೆಯ ಸೈದ್ಧಾಂತಿಕ ಉತ್ತರಾಧಿಕಾರಿಯಾಗಲು ಅರ್ಹರು ಎಂದು ಹೇಳಿರುವುದು ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯ ನಂತರ ನವೆಂಬರ್ ಮಧ್ಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಅವರ ಸಂಪುಟ ಪುನರ್ರಚನೆ ಅಥವಾ ಅಧಿಕಾರ ವರ್ಗಾವಣೆಯಾಗಲಿದೆ ಎಂಬ ಮಾತುಗಳು ಪಕ್ಷದೊಳಗೆ ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಸಿಎಂ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳು ನಾಯಕತ್ವ ಸಂಬಂಧ ಜಗಳ ಮುಂದುವರಿಸಿವೆ.
ನಾನು ಯತೀಂದ್ರ ಅವರನ್ನು ಕೇಳಿದೆ ಮತ್ತು ಅವರು ಮುಂದಿನ ಸಿಎಂ ಯಾರು ಆಗಬೇಕು ಎಂಬುದರ ಬಗ್ಗೆ ಮಾತನಾಡಿಲ್ಲ, ಬದಲಾಗಿ ಸೈದ್ಧಾಂತಿಕ ನೆಲೆಯಲ್ಲಿ ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನವೆಂಬರ್ 20, 2025 ರಂದು ಸಿದ್ದರಾಮಯ್ಯ ತಮ್ಮ ಎರಡೂವರೆ ವರ್ಷ ಅಧಿಕಾರ ಪೂರ್ಣಗೊಳಿಸಿದ ನಂತರ ಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, “ನಮ್ಮ ಪಕ್ಷದಲ್ಲಿ ಶಿಸ್ತಿಗೆ ಆದ್ಯತೆ. ನಾನು ಈಗ ಮಾತನಾಡುವುದಿಲ್ಲ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ” ಎಂದು ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಎಲ್ಲದಕ್ಕೂ ನಿರ್ಲಿಪ್ತವಾಗಿರುವ ಶಿವಕುಮಾರ್ ಸಮಯ ಬಂದಾಗ ಮಾತನಾಡುವುದಾಗಿ, ಅಲ್ಲಿಯವರೆಗೂ ಮೌನ ಕ್ರಾಂತಿ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದರರ್ಥ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಮತ್ತು ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.










