ಚನ್ನರಾಯಪಟ್ಟಣ: ತಾಲ್ಲೂಕಿನಾದ್ಯಂತ ವೈಭವದ ವೈಕುಂಠ ಏಕಾದಶಿ ಆಚರಣೆ

ಚನ್ನರಾಯಪಟ್ಟಣ: ಪಟ್ಟಣ ಸೇರಿದಂತೆ ಗಿರಿಕ್ಷೇತ್ರದ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ಸನ್ನಿಧಿ, ಬೂಕದ ಶ್ರೀ ರಂಗನಾಥ ಸ್ವಾಮಿ ಸನ್ನಿಧಿ ಹಾಗೂ ತಾಲ್ಲೂಕು ವ್ಯಾಪ್ತಿಯ ವಿವಿಧ ದೇಗುಲಗಳಲ್ಲಿ ವೈಕುಂಠ ಏಕಾದಶಿ ಆಚರಣೆಯು ಮಂಗಳವಾರ ವೈಭವದಿಂದ ನೆರವೇರಿತು.

ಹಿನ್ನೆಲೆಯಲ್ಲಿ ದೇಗುಲಗಳಿಗೆ ಹಸಿರು ಚಪ್ಪರ ಹಾಕಲಾಗಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀ ವೆಂಕಟೇಶ್ವರ ಸ್ವಾಮಿ ಮೂರ್ತಿಯನ್ನು ಒಡವೆ-ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಮುಂಜಾನೆ 5.30 ರಿಂದಲೇ ದೇಗುಲಗಳಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಆರಂಭವಾಗಿದ್ದು ಭಕ್ತರು ಪಾಲ್ಗೊಂಡು ಹಣ್ಣು-ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿದರು. ಸರದಿ ಸಾಲಿನಲ್ಲಿ ನಿಂತು ಗೋವಿಂದ ನಾಮ ಜಪಿಸುತ್ತ ದೇವರ ದರ್ಶನ ಪಡೆದು ಭಕ್ತಿ ಭಾವದಲ್ಲಿ ತೇಲಿದರು. ಮಹಾಮಂಗಳಾರತಿ ಬೆಳಗಿಸಿದ ನಂತರ ಪ್ರಸಾದ ವಿನಿಯೋಗ ನಡೆಯಿತು.

ಶಾಸಕ ಸಿ.ಎನ್.ಬಾಲಕೃಷ್ಣ ಅವರು ತಾಲ್ಲೂಕು ವ್ಯಾಪ್ತಿಯ ವಿವಿಧ ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಗಿರಿಕ್ಷೇತ್ರದ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರು ಮಾತನಾಡಿ, ಪ್ರತಿ ಗ್ರಾಮಗಳಲ್ಲಿಯೂ ಧಾರ್ಮಿಕ ಕೇಂದ್ರಗಳು ಹೆಚ್ಚಿದಂತೆಲ್ಲ ಸನಾತನ ಧರ್ಮ ಉಳಿದು ಬೆಳೆಯಲು ಪೂರಕವಾಗಿರುತ್ತದೆ‌. ಧರ್ಮ ಉಳಿದರೆ ಮಾತ್ರ ನಮ್ಮೆಲ್ಲರ ಬದುಕು ಸಾರ್ಥಕವಾಗಲು ಸಾಧ್ಯ ಎಂದರು.

ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇಗುಲ ನಿರ್ಮಾಣಕ್ಕೆ 10 ಲಕ್ಷ ರೂ. ಸಹಕಾರ ನೀಡಲಾಗಿದೆ. ಗಿರಿಕ್ಷೇತ್ರ ದೇಗುಲದ ಬಳಿಯಿಂದ ಮಸಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.

ನುಗ್ಗೇಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಬಸವರಾಜ್, ಮಂಜುನಾಥ್, ಆರು ಗ್ರಾಮಗಳ ಬುಡಕಟ್ಟಿನ ಭಕ್ತರು ಪಾಲ್ಗೊಂಡಿದ್ದರು. ಗಿರಿಕ್ಷೇತ್ರದಲ್ಲಿ ನಡೆದ ವೈಕುಂಠ ಏಕಾದಶಿ ಆಚರಣೆಯಲ್ಲಿ ಸೋಮಗಳ ಕುಣಿತ ನೋಡುಗರ ಗಮನ ಸೆಳೆಯಿತು.