11.8 C
Munich
Home ಜಿಲ್ಲೆ ಹಾಸನ ಚನ್ನರಾಯಪಟ್ಟಣ: ನ.1ರಿಂದ ಶ್ರೀ ಕ್ಷೇತ್ರ ಕಬ್ಬಳಿ ಬಸವೇಶ್ವರ ಜಾತ್ರಾ ಮಹೋತ್ಸವ

ಚನ್ನರಾಯಪಟ್ಟಣ: ನ.1ರಿಂದ ಶ್ರೀ ಕ್ಷೇತ್ರ ಕಬ್ಬಳಿ ಬಸವೇಶ್ವರ ಜಾತ್ರಾ ಮಹೋತ್ಸವ

ಚನ್ನರಾಯಪಟ್ಟಣ: ಶ್ರೀಕ್ಷೇತ್ರ ಕಬ್ಬಳಿ ಮಠದಲ್ಲಿ ನ.1 ರಿಂದ 5ರವರೆಗೆ ಶ್ರೀ ಬಸವೇಶ್ವರ ಸ್ವಾಮಿಯ ವಿಜೃಂಭಣೆಯ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ  ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು‌.

ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.1 ಶನಿವಾರ ಬೆಳಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಸನ್ನಿಧಿಯ ಆವರಣದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ಬಸವೇಶ್ವರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಲಿದ್ದು ಗೋಪೂಜೆ ನೆರವೇರಲಿದೆ ಎಂದರು‌.

ಅಂದು ಸಂಜೆ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಲಿದೆ. ನ.2 ಭಾನುವಾರ ಬೆಳಗ್ಗೆ ಶ್ರೀ ಬಸವೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ವಿಧಿ ವಿಧಾನಗಳು ಜರುಗಲಿದ್ದು, ಸಂಜೆ 6.30 ರಿಂದ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನ.3 ಸೋಮವಾರ ಬೆಳಗ್ಗೆ ಚುಂಚಶ್ರೀಗಳ ದಿವ್ಯಸಾನಿಧ್ಯದಲ್ಲಿ ಬೆಂಗಳೂರಿನ ಉದ್ಯಮಿ ಶ್ರೀಮತಿ ಪ್ರದೀಪಾ ಶ್ರೀ ವೆಂಕಟೇಶ ಪ್ರಸಾದ್ ಕುಟುಂಬದವರಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ. ಸಂಜೆ ಸುಮಾರಿಗೆ ಶ್ರೀ ಬಸವೇಶ್ವರಸ್ವಾಮಿ ಸರ್ಪೋತ್ಸವ, ಶ್ರೀ ಚೌಡೇಶ್ವರಿದೇವಿ ಉತ್ಸವ, ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುತ್ತಳಿಕೆ, ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಉತ್ಸವ, ನಂತರ ದೇಗುಲದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸವ ವೈಭವದಿಂದ ಸಾಗಲಿದೆ. ನಂತರ ಧಾರ್ಮಿಕ ಸಭೆ, ಚುಂಚಶ್ರೀಗಳಿಗೆ ಪುಷ್ವವೃಷ್ಟಿ ನಡೆಯಲಿದೆ ಎಂದರು‌.

ನ.4 ಮಂಗಳವಾರ ಬೆಳಗ್ಗೆ ಭಕ್ತರಿಂದ ಬಸವೋತ್ಸವ ಹಾಗೂ ಸಂಜೆ ಸುಮಾರಿನಲ್ಲಿ ಖ್ಯಾತ ವಾಗ್ಮಿ ಶಿವಾರ ಉಮೇಶ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ನ.5 ಬುಧವಾರ ಬೆಳಗ್ಗೆ ಎಂದಿನಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಸಂಜೆ 5 ಗಂಟೆಗೆ ಸಲ್ಲುವ ಗೋಧೂಳಿ ಲಗ್ನದಲ್ಲಿ ಧರ್ಮಧ್ವಜ ಅವರೋಹಣ, ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಊರಿನ ರಾಜಭೀದಿಯಲ್ಲಿರುವ ಮೆರೆವಿಗ್ರಹ ದೇಗುಲಕ್ಕೆ ಉತ್ಸವ ಮೂರ್ತಿಯನ್ನು ಗುಡಿದುಂಬಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದರು.

ಕಳೆದ 2 ವರ್ಷದ ಹಿಂದೆ ಜಾತ್ರಾ ಮಹೋತ್ಸವದ ಸಮಯದಲ್ಲಿ ಕಬ್ಬಳಿ ಗ್ರಾಮಸ್ಥರು ಹಾಗೂ ಸಮಸ್ತ ಭಕ್ತರ ಸಹಕಾರದೊಂದಿಗೆ ಶ್ರೀ ಬಸವೇಶ್ವರ ಸ್ವಾಮಿಯ ದೇಗುಲದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದ್ದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಸುತ್ತಮುತ್ತಲ ಗ್ರಾಮಗಳಿಂದ ರೈತರು ತಮ್ಮ ಜಾನುವಾರುಗಳನ್ನು ಶ್ರೀ ಕ್ಷೇತ್ರದ ಸನ್ನಿಧಿಗೆ ಕರೆತಂದು ದೇಗುಲದ ಸುತ್ತ ಪ್ರದಕ್ಷಣೆ ಮಾಡಿಸಿ ತೀರ್ಥ ಪ್ರೋಕ್ಷಣೆ ಮಾಡಿಸುವುದು ವಿಶೇಷ. ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಪ್ರತಿವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು ನೀರು, ನೆರಳು ಹಾಗೂ ಅನ್ನದಾಸೋಹದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಎಂದಿನಂತೆಯೇ ಮಾಡಲಾಗುವುದು ಎಂದು ತಿಳಿಸಿದರು. ಶ್ರೀಕ್ಷೇತ್ರ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ಇದ್ದರು.

error: Content is protected !!