ಹಾಸನ, ಮಾರ್ಚ್ 3: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಿತ್ರನಟರಿಗೆ ನೀಡಿರುವ ಎಚ್ಚರಿಕೆ ಕುರಿತು ಹಾಸನದಲ್ಲಿ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
“ಚಲನಚಿತ್ರ ನಟರು ಮತ್ತು ಕಲಾವಿದರು ಸಾಮಾನ್ಯ ನಾಗರಿಕರೇ. ಅವರು ಹೋರಾಟದಲ್ಲಿ ಪಾಲ್ಗೊಳ್ಳಬೇಕೋ ಬೇಡವೋ? ಎಂಬುದನ್ನು ಅವರೇ ತೀರ್ಮಾನಿಸಬೇಕು. ಅವರನ್ನು ಪ್ರಶ್ನಿಸುವುದು ಸೂಕ್ತವಲ್ಲ” ಎಂದು ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಂದು ಪಕ್ಷದವರು ಹೋರಾಟ ನಡೆಸಿದರೆ, ಅವರ ಪಕ್ಷದ ಕಾರ್ಯಕರ್ತರೆಲ್ಲ ಸೇರಿ ಹೋರಾಟ ಮಾಡುತ್ತಾರೆ. ಆದರೆ ಚಲನಚಿತ್ರ ಕ್ಷೇತ್ರದವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಹೀಗಾಗಿ, ಅವರನ್ನು ಪ್ರಶ್ನಿಸುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಆಡಳಿತದ ವೈಫಲ್ಯ
ಅಧಿಕಾರದಲ್ಲಿರುವವರು “ಸರ್ವಾಧಿಕಾರಿ ಘೋಷಣೆ” ಮಾಡುವುದು ಕಡಿಮೆ ಮಾಡಬೇಕು ಎಂದು ಸಂಸದರು ಅಭಿಪ್ರಾಯಪಟ್ಟರು. “ಇದು ಅವರ ಅಹಂಕಾರವನ್ನು ತೋರಿಸುತ್ತದೆ. ಅಧಿಕಾರಕ್ಕೇರಿದವರು ಜನಸೇವೆ ಮಾಡಬೇಕು, ಅಧಿಕಾರದ ಪ್ರಭಾವದಲ್ಲಿ ವರ್ತಿಸಬಾರದು” ಎಂದರು.
ಸಿಎಂ ಬದಲಾವಣೆ ಚರ್ಚೆ – ಕಾಂಗ್ರೆಸ್ ಒಳಗಿನ ವಿಚಾರ
ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಕುರಿತು ಆಡಳಿತದಲ್ಲಿ ಇರುವರು ತೀರ್ಮಾನಿಸಬೇಕಾದುದು. ಇದು ಕಾಂಗ್ರೆಸ್ ಪಕ್ಷದ ಒಳಗಿನ ಸಮಸ್ಯೆ, ಅದಕ್ಕೂ ನಮಗೂ ಸಂಬಂಧವಿಲ್ಲ” ಎಂದರು.
“ಮುಖ್ಯಮಂತ್ರಿ ಸ್ಥಾನಕ್ಕಾಗಿ ವಾದ-ಸಂವಾದ ನಡೆಯುತ್ತಿದೆ. ಆದರೆ ಸರ್ಕಾರದ ಕಾರ್ಯಕ್ಷಮತೆ ಮತ್ತು ಆಡಳಿತದ ಗುಣಮಟ್ಟ ಜನತೆಗೆ ಮುಖ್ಯ. ಯಾರು ಸಿಎಂ ಆಗಬೇಕು ಎಂಬ ನಿರ್ಧಾರವನ್ನು ಅವರೇ ಮಾಡಲಿ” ಎಂದು ಅವರು ಹೇಳಿದರು.
ಲೋಕಸಭಾ ಕ್ಷೇತ್ರ ಮರುವಿಂಗಡನೆ – ಕೇಂದ್ರದ ಮೇಲೆ ತಪ್ಪು ಆರೋಪ
ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಕುರಿತಂತೆ ಕಾಂಗ್ರೆಸ್ ಸರ್ಕಾರ ಮಾಡಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಆಡಳಿತ ವೈಫಲ್ಯ ಮುಚ್ಚಿಹಾಕಲು ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಗೃಹ ಸಚಿವರು ಸ್ಪಷ್ಟಪಡಿಸಿರುವಂತೆ, ಕ್ಷೇತ್ರಗಳು ಕಡಿಮೆಯಾಗುವ ಸಂಭವವಿಲ್ಲ” ಎಂದರು.
ಇದು ಜನಪರ ಆಡಳಿತ ನೀಡುವುದು ಸರ್ಕಾರದ ಮೇಲಿನ ಹೊಣೆಗಾರಿಕೆ. ಈ ವಿಷಯದ ಬಗ್ಗೆ ರಾಜಕೀಯ ಮಾಡುವುದು ಬೇಡ” ಎಂದರು.








