ಹಾಸನ: ತಾಲೂಕಿನ ನಿಟ್ಟೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ 11ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಂಗಾಧರ, ನಟರಾಜು, ಹುಚ್ಚೇಗೌಡ, ಮಂಜುನಾಥ್, ಮಂಜುಶೆಟ್ಟಿ ಹಾಗೂ ಮಹಿಳಾ ಮಿಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಪದ್ಮ, ಶಾಂತಮ್ಮ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮಲ್ಲೇಶ್, ಪ್ರವರ್ಗ-ಎ ಪರಮೇಶಪ್ಪ , ಪ್ರವರ್ಗ-ಬಿ ಯಿಂದ ಸ್ಪರ್ಧಿಸಿದ್ದ ಲಿಂಗರಾಜು ಭಾರೀ ಬಹುಮತದಿಂದ ಗೆದಿದ್ದಾರೆ. ನೂತನ ನಿರ್ದೇಶಕರಿಗೆ ಮಾಜಿ ಶಾಸಕ ಪ್ರೀತಂ ಜೆ.ಗೌಡ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, 11 ಸ್ಥಾನಗಳಲ್ಲಿ 10ರಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿರುವುದು ನಮ್ಮ ಕಾರ್ಯಕರ್ತರ ಸಂಘಟಿತ ಶ್ರಮದಿಂದ ತಾಲೂಕಿನಲ್ಲಿ ರಾಜಕೀಯ ಗಾಳಿ ಯಾವ ಕಡೆ ಬೀಸಿದೆ ಎಂಬುದನ್ನು ತೋರಿಸಿದ್ದೀರಿ ಎಂದು ಎಲ್ಲರಿಗೂ ಅಭಿನಂದನೆ ಹೇಳಿದರು.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಿಟ್ಟೂರು ಪಂಚಾಯಿತಿಯಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸುತ್ತದೆಯೋ ಆ ಪಕ್ಷ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಲಿದೆ ಎಂಬ ಮಾತು ಹಿಂದಿನಿಂದಲೂ ಇದೆ. ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗೆ ಬಿಜೆಪಿಯನ್ನು ಬೇರು ಮಟ್ಟದಿಂದಲೂ ಬಲಪಡಿಸಬೇಕಿದೆ ಎಂದರು.
2028ರ ಚುನಾವಣೆಯಲ್ಲಿ ರಾಜ್ಯದಲ್ಲಿ 130 ಸ್ಥಾನ ಗೆದ್ದು, ಸ್ವಂತ ಬಲದಿಂದ ಬಿಜೆಪಿ ಅಧಿಕಾರ ಹಿಡಿಯಬೇಕು ಎಂಬುದು ನಮ್ಮ ರಾಜ್ಯಾಧ್ಯಕ್ಷರ ಅಪೇಕ್ಷೆ, ಅದಕ್ಕಾಗಿ ನಾವೆಲ್ಲೂ ಒಟ್ಟಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.
BJP-backed candidates have won a landslide victory in the elections held for the Nittur Milk Producers’ Cooperative Society in Hassan taluk.










