ಬೀದ‌ರ್: ಬೈಕ್ ಸವಾರನ ಜೀವ ತೆಗೆಯಿತು ಗಾಳಿಪಟದ ಮಾಂಜಾ!

ಬೀದ‌ರ್: ಬೈಕ್ ಮೇಲೆ ತೆರಳುವಾಗ ಗಾಳಿಪಟದ ಮಾಂಜಾ ಕತ್ತಿಗೆ ಸಿಕ್ಕಿಕೊಂಡು ಸೀಳಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ಬುಧವಾರ ನಡೆದಿದೆ.

ಸಂಜುಕುಮಾರ ಗುಂಡಪ್ಪ ಹೊಸಮನಿ (48) ಮೃತ ವ್ಯಕ್ತಿ. ಮೃತರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.  ಸಂಕ್ರಾಂತಿ ಹಬ್ಬದ ರಜೆ ಇರುವುದರಿಂದ ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಕರೆತರಲು ಬೈಕ್ ಮೇಲೆ ತೆರಳುವಾಗ ಈ ಘಟನೆ ನಡೆದಿದೆ.

ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದ ಸೇತುವೆ ಬಳಿ ಈ ಘಟನೆ ಜರುಗಿದೆ. ಕತ್ತಿಗೆ ಮಾಂಜಾ ಸಿಲುಕಿ ರಕ್ತಸ್ರಾವವಾಗಿ ಕೆಳಗೆ ಬಿದ್ದು ಹೊರಳಾಡಿ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹುಮನಾಬಾದ್, ಚಿಟಗುಪ್ಪ ಭಾಗದಲ್ಲಿ ಜನ ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ.

‘ಪೇಂಚ್’ ಆಟಕ್ಕೆ ಮಾಂಜಾ ಹೆಚ್ಚಾಗಿ ಬಳಸುವ ರೂಢಿಯಿದ್ದು, ಇದರ ಬಳಕೆ ನಿರ್ಬಂಧಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದರು. ಆದರೂ. ಆದರೆ ಬಳಕೆ ಅವ್ಯಾಹತವಾಗಿ ನಡೆದಿದೆ.