ಹಾಸನ: “ಜೀವನಾನುಭವಗಳು ವ್ಯಕ್ತಿಯ ಶಕ್ತಿ ಮತ್ತು ಸಾಹಿತ್ಯದ ಮೂಲ ಬಲ,” ಎಂದು ಹಿರಿಯ ಲೇಖಕ ಗೊರೂರು ಶಿವೇಶ್ ಹೇಳಿದರು. ಅವರು ನಗರದ ಟಾರ್ಗೆಟ್ ಪಿ .ಯು. ಕಾಲೇಜಿನಲ್ಲಿ ಕದಂಬ ಸೈನ್ಯ ಹಾಸನ ಘಟಕದ ವತಿಯಿಂದ ನಡೆದ ಪದಗ್ರಹಣ ಸಮಾರಂಭ, ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಹಾಗೂ ಡಾ. ಎಸ್.ಎಲ್. ಭೈರಪ್ಪನವರ ಶ್ರದ್ಧಾಂಜಲಿ ಕರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಭೈರಪ್ಪನವರು ಬಾಲ್ಯದಲ್ಲೇ ಸೋದರ, ಸೋದರಿಯರು ಹಾಗೂ ತಾಯಿಯನ್ನು ಕಳೆದುಕೊಂಡು ಅನಾಥರಾದ ಸಂದರ್ಭಗಳಲ್ಲಿ ಹುಟ್ಟಿದ ಜೀವನದ ಪ್ರಶ್ನೆಗಳಿಗೆ ತತ್ವಶಾಸ್ತ್ರದಲ್ಲಿ ಉತ್ತರ ಕಂಡು, ಆ ಆತ್ಮಾನುಭವಗಳನ್ನು ತಮ್ಮ ಕೃತಿಗಳ ಮೂಲಕ ಸಾಹಿತ್ಯದ ರೂಪದಲ್ಲಿ ಪರಿಚಯಿಸಿದರು. “ತತ್ವಶಾಸ್ತ್ರವು ಜೀವನಕ್ಕೆ ದಿಕ್ಕು ನೀಡುತ್ತದೆ, ಆದರೆ ಸಾಹಿತ್ಯವು ಅದಕ್ಕೆ ಭಾವದ ಆಳತೆ ನೀಡುತ್ತದೆ. ಈ ಎರಡರ ಸಮನ್ವಯವೇ ಭೈರಪ್ಪ ಸಾಹಿತ್ಯದ ಶಕ್ತಿ,” ಎಂದು ಅವರು ವಿಶ್ಲೇಷಿಸಿದರು.
ಕಾರ್ಯಕ್ರಮವನ್ನು ಹಲೋ ಹಾಸನ್ ದಿನಪತ್ರಿಕೆಯ ಸಂಪಾದಕರು ರವಿ ನಾಕಲಗೂಡು ಉದ್ಘಾಟಿಸಿದರು. ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕರಿ ರಮೇಶ್, ರಾಜ್ಯ ಉಪಾಧ್ಯಕ್ಷ ಡಾ. ದೇವನಹಳ್ಳಿ ದೇವರಾಜ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ಉಮೇಶ್, ಮಂಡ್ಯ ಜಿಲ್ಲೆ ಉಪಾಧ್ಯಕ್ಷ ರಾಮ ಚಿಕ್ಕಗೌಡ ನದೊಡ್ಡಿ, ಮಹದೇವಸ್ವಾಮಿ (ಮೈಸೂರು), ನಿವೃತ್ತ ಪ್ರಾಂಶುಪಾಲರು ಮತ್ತು ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ್ ಅಂಕಪುರ, ಹೊಳೆನರಸೀಪುರ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ಅರಕಲಗೂಡು ಘಟಕದ ಅಧ್ಯಕ್ಷ ರವಿಕುಮಾರ್, ಸಕಲೇಶಪುರ ಘಟಕದ ಅಧ್ಯಕ್ಷ ಸಾಹಿತಿ ವಿಶ್ವಾಸ್.ಡಿ.ಗೌಡ, ಹಾಸನ ಜಿಲ್ಲಾ ಉಪಾಧ್ಯಕ್ಷ ಯಾಕೂಬ್ ಗೊರೂರು, ಸಿರಿಗನ್ನಡ ವೇದಿಕೆ (ರಿ) ಹಾಸನ ಘಟಕದ ಅಧ್ಯಕ್ಷ ಮತ್ತು ಸಿರಿಗನ್ನಡ ದಿನಪತ್ರಿಕೆಯ ಸಂಪಾದಕರು ಎನ್.ಬಿ. ಆನಂದ ಪಟೇಲ್ ನೆಲ್ಲಿಗೆರೆ, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಈ. ಕೃಷ್ಣಗೌಡ, ನಿವೃತ್ತ ಉಪನ್ಯಾಸಕ ಹೆಚ್.ಆರ್. ರಂಗಸ್ವಾಮಿ ಹಾಗೂ ಪತ್ರಕರ್ತ ವಿಜಯಕುಮಾರ್ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ಟಾರ್ಗೆಟ್ ಕಾಲೇಜಿನ ಪ್ರಾಂಶುಪಾಲ ರಾಹುಲ್ ವಹಿಸಿದರು. ಸಾಹಿತಿ ಗೊರೂರು ಅನಂತರಾಜು ನಿರೂಪಿಸಿದರು, ಕನ್ನಡ ಉಪನ್ಯಾಸಕ ದೇವರಾಜ್ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಕಾರಣರಾದರು.










