ಬೆಂಗಳೂರು : ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಯಾರು ವಿನ್ನರ್ ಆಗ್ತಾರೆ ಎಂಬ ಕುತೂಹಲ ತೀವ್ರವಾಗಿದೆ. ಈ ನಡುವೆ ಮಾಜಿ ಬಿಗ್‌ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಅವರು ತಮ್ಮ ಆಯ್ಕೆಯನ್ನು ಬಹಿರಂಗಪಡಿಸಿದ್ದು, ಗಿಲ್ಲಿ ಪರವಾಗಿ ಓಪನ್ ಸಪೋರ್ಟ್ ನೀಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಿರಿಕ್ ಕೀರ್ತಿ ಪೋಸ್ಟ್‌ನಲ್ಲಿ, “ಯಾವತ್ತೂ ಬಿಗ್‌ಬಾಸ್ ಮನೆಯಲ್ಲಿ ಇಂತವರೇ ಗೆಲ್ಲಬೇಕು ಅಂತ ಹೇಳಿದವನಲ್ಲ. ಆದ್ರೆ ಈ ಹುಡುಗ ಮಾಡಿದ ಮೋಡಿಗೆ ಫಿದಾ ಆಗದವರು ಯಾರು? ಮನೆಯೊಳಗೆ ಕೆಲವರಿಗೆ ಸಿಲ್ಲಿ ಅನಿಸಿದರೂ, ಹೊರಗೆ ಕೂತು ನೋಡೋರಿಗೆ ಗಿಲ್ಲಿ ನೀಡಿದ ಮನರಂಜನೆ ಅಷ್ಟಿಷ್ಟಲ್ಲ.
ಆನ್ ಸ್ಪಾಟ್ ಡೈಲಾಗ್‌ಗಳಿಗೆ ಅಭಿಮಾನಿಗಳೇ ಫಿದಾ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಕೂಡ ರೇಸಲ್ಲಿ ಇದ್ದಾಳೆ, ಆದರೆ ಗಿಲ್ಲಿ ಈಗಾಗಲೇ ಗೆಲುವಿನ ಹೆಬ್ಬಾಗಿಲಲ್ಲಿ ನಿಂತಿದ್ದಾನೆ. ಗೆದ್ದು ಬಾ ಗಿಲ್ಲಿ… ವೋಟ್ ಮಾಡೋದನ್ನ ಮರೆಯಬೇಡಿ, ನಮ್ಮ ಹುಡುಗ ಗೆಲ್ಲಬೇಕು” ಎಂದು ಬರೆದುಕೊಂಡಿದ್ದಾರೆ.
ಆಟದ ಆರಂಭದಿಂದಲೇ ಗಿಲ್ಲಿ ನಟ ಒನ್ ಮ್ಯಾನ್ ಶೋ ಎನ್ನುವ ಮಟ್ಟಿಗೆ ಮನರಂಜನೆ ನೀಡಿದ್ದು, ಟಾಸ್ಕ್‌ಗಳಲ್ಲಿ ಚುರುಕು, ಅತಿಥಿಗಳ ಜೊತೆಗಿನ ಹಾಸ್ಯ, ಸ್ಪರ್ಧಿಗಳ ಜೊತೆಗಿನ ವಾಗ್ವಾದಗಳಿಂದ ಸದಾ ಸುದ್ದಿಯಲ್ಲಿದ್ದರು. ಅಶ್ವಿನಿ ಗೌಡ, ಧ್ರುವಂತ್, ರಾಶಿಕಾ ಶೆಟ್ಟಿ, ರಘು ಹಾಗೂ ರಿಷಾ ಗೌಡ ಜೊತೆ ಅವರ ಜಗಳಗಳು ಶೋಗೆ ಇನ್ನಷ್ಟು ಹೈಪ್ ತಂದಿವೆ.
ಆರಂಭದಲ್ಲಿ ಅಶ್ವಿನಿ ಗೌಡ ಕಾಲಿಗೆ ಬೀಳಲು ಮುಂದಾದ ಗಿಲ್ಲಿ ನಟ, ನಂತರದ ದಿನಗಳಲ್ಲಿ ಟಾಸ್ಕ್‌ಗಳಲ್ಲಿ ಸವಾಲು ಹಾಕುವ ಮೂಲಕ ಆಟವನ್ನು ಗೆದ್ದು ತೋರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಬೇಡದ ಪದಗಳ ಬಳಕೆ ಮತ್ತು ತೇಜೋವಧೆಯಂತೆ ಮಾತನಾಡುತ್ತಾರೆ ಎಂಬ ಆರೋಪಗಳಿದ್ದರೂ, ಗಿಲ್ಲಿ ಇಲ್ಲದೆ ಈ ಸೀಸನ್ ಬಿಗ್‌ಬಾಸ್ ಅಪೂರ್ಣ ಎನ್ನುವ ಮಟ್ಟಿಗೆ ಅವರು ಶೋಗೆ ಜೀವ ತುಂಬಿದ್ದಾರೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.










