ಬೆಂಗಳೂರು: ಮೂರು ತಿಂಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸೇರಿದ ₹7.11 ಕೋಟಿ ದರೋಡೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಿದ್ದಾಪುರ ಠಾಣೆ ಪೊಲೀಸರು, ನಗರದ 56ನೇ ಎಸಿಎಂಎಂ-ಸಿಸಿಎಚ್ ನ್ಯಾಯಾಲಯಕ್ಕೆ 1,328 ಪುಟಗಳ ಸಮಗ್ರ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ
ಈ ಪ್ರಕರಣದಲ್ಲಿ ಗೋವಿಂದಪುರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಸೇರಿದಂತೆ ಒಟ್ಟು ಒಂಬತ್ತು ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ–2023ರ ಅನ್ವಯ ದರೋಡೆ, ಅಕ್ರಮ ಬಂಧನ, ಸಾಕ್ಷ್ಯ ನಾಶ, ಅಪರಾಧ ಸಂಚು, ಬೆದರಿಕೆ ಸೇರಿದಂತೆ ಹಲವು ಗಂಭೀರ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
129 ಪುರಾವೆಗಳು, ತಾಂತ್ರಿಕ ಸಾಕ್ಷ್ಯಗಳ ಬಲ
ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯಲ್ಲಿ ಒಟ್ಟು 129 ಪುರಾವೆಗಳನ್ನು ಉಲ್ಲೇಖಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು, ಸಿಸಿಟಿವಿ ದೃಶ್ಯಗಳು, ಮೊಬೈಲ್ ಕಾಲ್ ಡೇಟಾ ವಿಶ್ಲೇಷಣೆ, ಆರೋಪಿಗಳ ಬೆರಳಚ್ಚು ಮತ್ತು ಇತರೆ ವೈಜ್ಞಾನಿಕ ಸಾಕ್ಷ್ಯಗಳನ್ನು ಸೇರಿಸಿ ಪ್ರಕರಣವನ್ನು ದೃಢಪಡಿಸಲು ಕ್ರಮ ಕೈಗೊಳ್ಳಲಾಗಿದೆ. ನಿಗದಿತ ಅವಧಿಯೊಳಗೆ ತನಿಖೆ ಪೂರ್ಣಗೊಳಿಸಿದ ಜಯನಗರ ಉಪ ವಿಭಾಗದ ಎಸಿಪಿ ನಾರಾಯಣಸ್ವಾಮಿ ಮತ್ತು ಅವರ ತಂಡವನ್ನು ಡಿಸಿಪಿ ಶ್ಲಾಘಿಸಿದ್ದಾರೆ.
ಆರೋಪಿಗಳ ಪಟ್ಟಿ
ಈ ಪ್ರಕರಣದಲ್ಲಿ ಆರೋಪಿಗಳಾಗಿ ಗುರುತಿಸಲಾದವರಲ್ಲಿ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಪ್ರಮುಖ ಸಂಚುಕೋರ (ಕಿಂಗ್‌ಪಿನ್) ಎಂದು ಹೇಳಲಾಗಿದೆ. ಇತರ ಆರೋಪಿಗಳು: ಸಿಎಂಎಸ್ ಮಾಜಿ ಉದ್ಯೋಗಿ ಕ್ಸೇವಿಯರ್ ಅಲಿಯಾಸ್ ಪ್ರಜನ್, ನೌಕರ ಗೋಪಿ, ಕಮ್ಮನಹಳ್ಳಿ ರವಿ, ಬಾಣಸವಾಡಿ ನವೀನ್, ನೆಲ್ಸನ್, ರಾಕೇಶ್ ಸೇರಿದಂತೆ ಇನ್ನೂ ಕೆಲವರು ಸೇರಿದ್ದಾರೆ.
ದರೋಡೆ ನಡೆದ ರೀತಿ
ನವೆಂಬರ್ 20ರಂದು ಜೆ.ಪಿ. ನಗರದಿಂದ ಗೋವಿಂದಪುರ ವ್ಯಾಪ್ತಿಯ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಿಸಲು ಸಿಎಂಎಸ್ ಸಿಬ್ಬಂದಿ ಹಣ ಸಾಗಿಸುತ್ತಿದ್ದರು. ಜಯನಗರದ ಅಶೋಕ ಸ್ತಂಭದ ಸಮೀಪ ಆರೋಪಿಗಳು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ವಾಹನವನ್ನು ಅಡ್ಡಗಟ್ಟಿ, ಸಿಬ್ಬಂದಿಯನ್ನು ಬೆದರಿಸಿ ₹7.11 ಕೋಟಿ ಹಣ ದೋಚಿಕೊಂಡು ಪರಾರಿಯಾಗಿದ್ದರು. ಈ ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.
ಘಟನೆಯ ನಂತರ ವಿಶೇಷ ತಂಡಗಳನ್ನು ರಚಿಸಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ದರೋಡೆಗೊಳಗಾಗಿದ್ದ ಬಹುತೇಕ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಐಷಾರಾಮಿ ಜೀವನದ ದುರಾಸೆ
ಆರೋಪಪಟ್ಟಿಯ ಪ್ರಕಾರ, ಸುಲಭವಾಗಿ ಅಪಾರ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸಬೇಕೆಂಬ ಉದ್ದೇಶದಿಂದಲೇ ಈ ದರೋಡೆ ಸಂಚು ರೂಪಿಸಲಾಗಿದೆ. ಕೆಲವರು ವೈಯಕ್ತಿಕ ಸಾಲ ತೀರಿಸಲು ಹಾಗೂ ಮೋಜು-ಮಸ್ತಿ ಜೀವನಕ್ಕಾಗಿ ಈ ಅಪರಾಧಕ್ಕೆ ಕೈ ಹಾಕಿದ್ದರೆಂದು ತನಿಖೆಯಲ್ಲಿ ಬಹಿರಂಗವಾಗಿದೆ.
“ಪ್ರಕರಣಕ್ಕೆ ಕಾನೂನಿನ ಮೂಲಕ ತಾರ್ಕಿಕ ಅಂತ್ಯ ಸಿಗುವವರೆಗೆ ನ್ಯಾಯಾಲಯದ ವಿಚಾರಣೆಯ ಮೇಲೆ ನಿಗಾ ಇಡಲಾಗುತ್ತದೆ,” ಎಂದು ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಈಗ ಪ್ರಕರಣ ನ್ಯಾಯಾಲಯದ ವಿಚಾರಣಾ ಹಂತದಲ್ಲಿದ್ದು, ಆರೋಪಿಗಳ ವಿರುದ್ಧ ಸಮಗ್ರ ಸಾಕ್ಷ್ಯಾಧಾರಗಳೊಂದಿಗೆ ಕಾನೂನು ಹೋರಾಟ ಮುಂದುವರಿಯಲಿದೆ.










