ಬೆಂಗಳೂರು : ಪಕ್ಕದ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು : ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. IPC ಸೆಕ್ಷನ್ 498ಎ ಅಡಿ ಪಕ್ಕದ ಮನೆಯವರ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸ್ಪಷ್ಟಪಡಿಸಿದೆ. ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದ್ದು, ಸಂಬಂಧಿತ ದೂರು ರದ್ದುಗೊಳಿಸಿದೆ.

ಮುನಿರತ್ನಮ್ಮ ಎಂಬ ಮಹಿಳೆ ಪತಿ, ಅತ್ತೆ, ಮಾವ, ನಾದಿನಿ ಜೊತೆಗೆ ಪಕ್ಕದ ಮನೆಯ ಮಹಿಳೆಯ ಮೇಲೆಯೂ ವರದಕ್ಷಿಣೆ ಕಿರುಕುಳ ಆರೋಪಿಸಿ ದೂರು ದಾಖಲಿಸಿದ್ದರು. ಆದರೆ 498ಎ ಕಲಂ ಅನ್ವಯ ದೂರು ದಾಖಲಿಸಬಹುದಾದವರು ಪತಿ ಹಾಗೂ ಅವರ ಸಂಬಂಧಿಕರು ಮಾತ್ರ. ನೆರೆಹೊರೆಯವರು ಅಥವಾ ಪರಿಚಯವಿಲ್ಲದ ವ್ಯಕ್ತಿಗಳನ್ನು ಈ ಕಲಂ ಅಡಿಯಲ್ಲಿ ಆರೋಪಿಗಳನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಆಶಾ ಎಂಬವರ ವಿರುದ್ಧ ದಾಖಲಾಗಿದ್ದ ದೂರುವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಆಶಾ ಅವರ ಮೇಲೆ IPC ಸೆಕ್ಷನ್‌ 498ಎ, 504, 506, 323 ಮತ್ತು 34 ಅಡಿ ಆರೋಪಗಳು ಹೊರಿಸಲ್ಪಟ್ಟಿದ್ದವು.

ಇನ್ನೊಂದು ಪ್ರಕರಣದಲ್ಲಿ, ಹೈಕೋರ್ಟ್‌ನಲ್ಲಿ ಕಾಯಂ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಐವರಿಂದ ಒಟ್ಟು 54 ಲಕ್ಷ ರೂಪಾಯಿ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ 7 ಮಂದಿ ವಿರುದ್ಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2023ರಲ್ಲಿ ಹೈಕೋರ್ಟ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದ ಸಂದರ್ಭದಲ್ಲಿ, FDA, SDA ಹಾಗೂ ಜಾರಿಕಾರ ಹುದ್ದೆಗಳಿಗೆ ಕೆಲಸ ಕೊಡಿಸುವುದಾಗಿ ಹೇಳಿ ಸುಮಿತ್, ಶಿವಕುಮಾರ್, ಮಹಿಮಾ, ಹರ್ಷ ಹಾಗೂ ಹರ್ಷಿತಾ ಅವರಿಂದ ಹಣ ಪಡೆದು ಮೋಸ ಮಾಡಲಾಗಿದೆ ಎನ್ನಲಾಗಿದೆ.

ಈ ಸಂಬಂಧ ಸುದರ್ಶನ್ ಆಡ್ಯಾಂತಾಯ್, ಲವಿನಾ ಜನೆಟ್ ಮೆಂಟೋರ್, ಮಹೇಂದ್ರ, ಜೈಸನ್ ಡಿಸೋಜಾ ಸೇರಿದಂತೆ ಒಟ್ಟು 7 ಜನರ ವಿರುದ್ಧ ದೂರು ದಾಖಲಾಗಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ನ ದಾಖಲೆಗಳನ್ನು ನಕಲಿ ಮಾಡಿ ಅರ್ಜಿಗಳ ದಾಖಲೆಗಳನ್ನು ತಿರುಚಿ ವಂಚನೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.