ಬೆಂಗಳೂರು : ವರದಕ್ಷಿಣೆ ಕಿರುಕುಳ: ಪತಿಯ ಪ್ರೇಯಸಿ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ: ಹೈಕೋರ್ಟ್

ಬೆಂಗಳೂರು : ವರದಕ್ಷಿಣೆ ಕಿರುಕುಳ ಹಾಗೂ ಕ್ರೌರ್ಯ ಆರೋಪಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 498ಎ ಅಡಿಯಲ್ಲಿ ಪತಿ ಅಥವಾ ಅವರ ಸಂಬಂಧಿಕರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಅಪರಿಚಿತರು, ನೆರೆಹೊರೆಯವರು ಅಥವಾ ಪತಿಯ ಪ್ರಿಯತಮೆಯ ವಿರುದ್ಧ ಈ ವಿಧಾನದಡಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಅರ್ಜಿದಾರಳ ವಿರುದ್ಧದ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಿದೆ. ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆಯನ್ನು ‘ಕುಟುಂಬದ ಸದಸ್ಯೆ’ ಎಂದು ಪರಿಗಣಿಸಲಾಗದು; ಆದ್ದರಿಂದ 498ಎ ಅಡಿ ಆಕೆಯನ್ನು ಆರೋಪಿಯಾಗಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅಲ್ಲದೆ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಅರ್ಜಿದಾರಳ ವಿರುದ್ಧ ಯಾವುದೇ ದೃಢ ಸಾಕ್ಷ್ಯಾಧಾರಗಳಿಲ್ಲವೆಂದು ಪೀಠ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣಕ್ಕೆ ಆಕೆಯನ್ನು ಎಳೆದು ತರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ

ದೂರುದಾರ ಮಹಿಳೆ 2021ರಲ್ಲಿ ರವಿ (ಹೆಸರು ಬದಲಿಸಲಾಗಿದೆ) ಅವರನ್ನು ವಿವಾಹವಾಗಿದ್ದರು. ವಿವಾಹದ ಕೆಲವೇ ದಿನಗಳಲ್ಲಿ ಪತಿಯ ಕುಟುಂಬಸ್ಥರು ಹೆಚ್ಚುವರಿ ವರದಕ್ಷಿಣೆ ಬೇಡಿಕೆ ಇಟ್ಟು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದರು. ಪತಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು, ನಿರಾಕರಿಸಿದ ಕಾರಣ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ದೂರು ದಾಖಲಿಸಿದ್ದರು.

ಇದರೊಂದಿಗೆ, ಪತಿ ತನ್ನ ಪ್ರೇಯಸಿಯೊಂದಿಗೆ ಮೊಬೈಲ್‌ನಲ್ಲಿ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದರು ಹಾಗೂ ತಾಸುಗಟ್ಟಲೆ ಮಾತನಾಡುತ್ತಿದ್ದರು ಎಂದು ಆಕೆ ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ, “ನಿನ್ನನ್ನು ಮದುವೆಯಾಗದಿದ್ದರೆ ಪ್ರೇಯಸಿಯೊಂದಿಗೆ ಸುಖವಾಗಿರುತ್ತಿದ್ದೆ” ಎಂದು ಹೇಳಿ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪತಿಯ ಕುಟುಂಬಸ್ಥರು ಹಾಗೂ ಪ್ರಿಯತಮೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರಿನ ಮಹಿಳಾ ಠಾಣೆಗೆ ಮನವಿ ಮಾಡಿದ್ದರು.

ಪೊಲೀಸರು ತನಿಖೆ ನಡೆಸಿ ಪತಿಯ ಪ್ರಿಯತಮೆಯನ್ನು ಐದನೇ ಆರೋಪಿಯಾಗಿ ಸೇರಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಆ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದಳು. ವಿಚಾರಣೆ ನಡೆಸಿದ ಹೈಕೋರ್ಟ್, 498ಎ ಅಡಿ ಪತಿಯ ಪ್ರಿಯತಮೆಗೆ ಪ್ರಕರಣ ಅನ್ವಯಿಸುವುದಿಲ್ಲ ಎಂದು ಹೇಳಿ ಆಕೆಯ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.