ಬೆಂಗಳೂರು: ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ವಾಗ್ವಾದ ತೀವ್ರಗೊಂಡಿದೆ.
ಈ ಕುರಿತಾಗಿ ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ದರ ಏರಿಕೆಯ ಹೊಣೆಯನ್ನು ಕೇಂದ್ರ ಸರ್ಕಾರದ ಮೇಲೆ ಹಾಕುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದರು. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ಮೆಟ್ರೋ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ ಶೇ.20 ಮಾತ್ರವಿದ್ದು, ಉಳಿದ ಬಹುಪಾಲು ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಆದರೂ ಎಲ್ಲ ವಿಷಯಗಳಿಗೂ ಕೇಂದ್ರವನ್ನೇ ದೂಷಿಸುವುದು ಕಾಂಗ್ರೆಸ್ ಸರ್ಕಾರದ ಹಳೆಯ ಚಾಳಿ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಅಧಿಕಾರ ಚಲಾಯಿಸುವಾಗ ಮಾತ್ರ ಕೇಂದ್ರವನ್ನು ಮರೆತು, ಸಮಸ್ಯೆ ಬಂದಾಗ ಗೂಬೆ ಕೂರಿಸುವುದನ್ನು ಜನ ಗಮನಿಸಬೇಕು ಎಂದರು.
ದರ ನಿಗದಿ ಅಧಿಕಾರ ಯಾರ ಕೈಯಲ್ಲಿ? – ಪ್ರಶ್ನಿಸಿದ HDK
ಮೆಟ್ರೋ ದರ ಏರಿಕೆಗೆ ಕೇಂದ್ರವೇ ಕಾರಣ ಎನ್ನುವ ಸರ್ಕಾರದ ವಾದವನ್ನು ಪ್ರಶ್ನಿಸಿದ ಕುಮಾರಸ್ವಾಮಿ, “ಬೇರೆ ರಾಜ್ಯಗಳಲ್ಲಿ ಮೆಟ್ರೋ ದರ ಏರಿಕೆಯಾಗಿಲ್ಲ. ಹಾಗಾದರೆ ಬೆಂಗಳೂರಿನಲ್ಲಿ ಮಾತ್ರ ಯಾಕೆ ಈ ಪರಿಸ್ಥಿತಿ? ರಾಜ್ಯ ಸರ್ಕಾರದ ಪಾಲು ಹೆಚ್ಚಿದ್ದಾಗ ದರ ನಿಗದಿ ಮಾಡುವ ಅಧಿಕಾರ ಯಾರದ್ದು?” ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ತಮ್ಮ ಜನವಿರೋಧಿ ನಿರ್ಣಯಗಳನ್ನು ಮುಚ್ಚಿಹಾಕಲು ಪ್ರತಿ ಬಾರಿಯೂ ಕೇಂದ್ರವನ್ನು ಎಳೆದು ತರುವುದು ಖಂಡನೀಯ ಎಂದು ಹೇಳಿದರು.
ಗ್ಯಾರೆಂಟಿಗಳ ಹೆಸರಿನಲ್ಲಿ ಜನರಿಗೆ ಮೋಸ
ಸರ್ಕಾರ ಜನರ ಆರ್ಥಿಕ ಶಕ್ತಿ ಹೆಚ್ಚಾಗಿದೆ ಎಂದು ಜಾಹೀರಾತು ಮಾಡುತ್ತಿದೆ. ತಲಾ ಆದಾಯ ಹೆಚ್ಚಾಗಿದೆ ಎಂಬ ಭ್ರಮೆಯಲ್ಲಿ ಇದ್ದು, ಎಷ್ಟು ದರ ಏರಿಸಿದರೂ ಜನ ಕೊಡುತ್ತಾರೆ ಎಂದು ಮುಖ್ಯಮಂತ್ರಿಗಳು ಭಾವಿಸಿರುವಂತೆ ಕಾಣುತ್ತದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು. ಗ್ಯಾರೆಂಟಿಗಳ ಹೆಸರಿನಲ್ಲಿ ಒಂದೆಡೆ ಹಣ ನೀಡಿ, ಮತ್ತೊಂದೆಡೆ ದರ ಏರಿಕೆಯ ಮೂಲಕ ಅದನ್ನೇ ಜನರಿಂದ ವಾಪಸ್ ಕಿತ್ತುಕೊಳ್ಳುವ ತಂತ್ರವನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ ನಿರಾಕರಣೆ
ಇದೇ ವೇಳೆ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಕುಮಾರಸ್ವಾಮಿ ನಿರಾಕರಿಸಿದರು. “ಅದು ಅವರ ಪಕ್ಷದ ಒಳಗಿನ ವಿಚಾರ. ಅದರ ಬಗ್ಗೆ ಮಾತನಾಡಲು ನನಗೇನು ಕೆಲಸ? ನನಗೆ ಸಾಕಷ್ಟು ಕೆಲಸಗಳಿವೆ. ಕಾಂಗ್ರೆಸ್‌ನ ಆಂತರಿಕ ಗೊಂದಲಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.










