ಬೆಂಗಳೂರು : ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಮಾರಾಟಕ್ಕೆ ಡಿಯಾಜಿಯೋ ಕಂಪೆನಿ ಅಧಿಕೃತವಾಗಿ ಮುಂದಾಗಿದೆ. ಮಾರಾಟ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಆರ್‌ಸಿಬಿ ಫ್ರಾಂಚೈಸಿಯ ಒಟ್ಟು ಮೌಲ್ಯವನ್ನು ಸುಮಾರು 2 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಭಾರತೀಯ ರೂಪಾಯಿಯಲ್ಲಿ ಇದು ಸುಮಾರು 18,000 ಕೋಟಿ ರೂ. ಆಗಲಿದೆ.
ಈ ಹಿನ್ನೆಲೆ ಆರ್‌ಸಿಬಿ ಫ್ರಾಂಚೈಸಿಯ ಬಿಡ್ಡಿಂಗ್ ಪ್ರಕ್ರಿಯೆ ಸುಮಾರು 18 ಸಾವಿರ ಕೋಟಿ ರೂ. ನಿಂದ ಆರಂಭವಾಗುವ ಸಾಧ್ಯತೆ ಇದೆ. ಈಗಾಗಲೇ ಹಲವು ದೊಡ್ಡ ಉದ್ಯಮಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಆರ್‌ಸಿಬಿ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿರುವುದರಿಂದ, ಬಿಡ್ಡಿಂಗ್ ಮೊತ್ತ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನವಾಲ ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿದ್ದಾರೆ. ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಅವರ ಜೆಎಸ್‌ಡಬ್ಲ್ಯೂ ಗ್ರೂಪ್ ಕೂಡ ಆರ್‌ಸಿಬಿ ಬಿಡ್ಡಿಂಗ್‌ಗೆ ಸಜ್ಜಾಗಿದೆ ಎನ್ನಲಾಗಿದೆ. ಮತ್ತೊಂದೆಡೆ, ಐಪಿಎಲ್‌ಗೆ ಹೊಸ ಎಂಟ್ರಿ ನೀಡುವ ಉದ್ದೇಶದಿಂದ ಅದಾನಿ ಗ್ರೂಪ್ ಕೂಡ ಆರ್‌ಸಿಬಿ ಫ್ರಾಂಚೈಸಿ ಮೇಲೆ ಕಣ್ಣಿಟ್ಟಿದೆ.
ಇದಲ್ಲದೆ ದೇವಯಾನಿ ಇಂಟರ್‌ನ್ಯಾಷನಲ್ ಗ್ರೂಪ್ ಕೂಡ ಖರೀದಿಗೆ ಆಸಕ್ತಿ ತೋರಿದ್ದು, ಅಮೆರಿಕದ ಖಾಸಗಿ ಹೂಡಿಕೆ ಸಂಸ್ಥೆಯೊಂದೂ ಡಿಯಾಜಿಯೋ ಜೊತೆ ಪ್ರಾಥಮಿಕ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ. Sportico ವರದಿ ಪ್ರಕಾರ, 18 ಸಾವಿರ ಕೋಟಿ ರೂ. ಬ್ರ್ಯಾಂಡ್ ಮೌಲ್ಯದೊಂದಿಗೆ ಆರ್‌ಸಿಬಿ ಫ್ರಾಂಚೈಸಿ ಮಾರಾಟಕ್ಕೆ ಇಡಲಾಗಿದೆ.
ಮಾರಾಟ ಪ್ರಕ್ರಿಯೆ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಭಾರೀ ಬಿಡ್ಡಿಂಗ್ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಆರ್‌ಸಿಬಿ ಕೊನೆಗೆ ಎಷ್ಟು ಕೋಟಿಗೆ ಮಾರಾಟವಾಗಲಿದೆ ಎಂಬುದು ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
RCB ಫ್ರಾಂಚೈಸಿ ಖರೀದಿಗೆ ಆಸಕ್ತಿ ಹೊಂದಿರುವವರು:
ಜೆಎಸ್‌ಡಬ್ಲ್ಯೂ ಗ್ರೂಪ್ (ಪಾರ್ಥ್ ಜಿಂದಾಲ್)
ಅದಾನಿ ಗ್ರೂಪ್ (ಗೌತಮ್ ಅದಾನಿ)
ಪೂನವಾಲ ಗ್ರೂಪ್ (ಆದಾರ್ ಪೂನವಾಲ)
ನಿಖಿಲ್ ಕಾಮತ್ (ಝೆರೋಧಾ)
ರಂಜನ್ ಪೈ (ಮಣಿಪಾಲ್ ಗ್ರೂಪ್)
ದೇವಯಾನಿ ಇಂಟರ್‌ನ್ಯಾಷನಲ್ ಗ್ರೂಪ್ (ರವಿಕಾಂತ್ ಜೈಪುರಿಯಾ) ಅಮೆರಿಕದ ಖಾಸಗಿ ಹೂಡಿಕೆ ಸಂಸ್ಥೆ










