ಬೆಂಗಳೂರು : ದರ್ಶನ್ ತೂಗುದೀಪ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆ ಆಗಲಿ ಎಂಬ ಆಶಯದಿಂದ ಅವರ ಅಭಿಮಾನಿಗಳು ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ, ಹೋಮ–ಹವನಗಳನ್ನು ಆಯೋಜಿಸಿದ್ದಾರೆ. ಫೆಬ್ರವರಿ 16ರಂದು 49ನೇ ವರ್ಷಕ್ಕೆ ಕಾಲಿಡುತ್ತಿರುವ ದರ್ಶನ್ ಈ ಬಾರಿ ಜೈಲಿನಲ್ಲೇ ಜನ್ಮದಿನ ಆಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ “ನಮ್ ಬಾಸ್ ಬೇಗ ಹೊರ ಬರಲಿ” ಎಂಬ ಸಂಕಲ್ಪದೊಂದಿಗೆ ಅಭಿಮಾನಿಗಳು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವಕೀಲರ ಪ್ರಕಾರ, ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣಾ ಹಂತ ಮುಗಿಯುತ್ತಿದ್ದಂತೆ ಜುಲೈ ಅಥವಾ ಆಗಸ್ಟ್ ವೇಳೆಗೆ ಜಾಮೀನು ಅರ್ಜಿ ಮರುಸಲ್ಲಿಕೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಂಗಳೂರು ಜೆ.ಪಿ ನಗರದ ಪುಟ್ಟೇನಹಳ್ಳಿಯ ನಂಜುಡೇಶ್ವರ ದೇವಾಲಯದಲ್ಲಿ ಫೆಬ್ರವರಿ 14ರಂದು ನವಗ್ರಹ ಶಾಂತಿ, ಮೃತ್ಯುಂಜಯ ಹೋಮ, ಗಣಪತಿ ಹೋಮ ಹಾಗೂ ದುರ್ಗಾ ಹೋಮಗಳನ್ನು ಆಯೋಜಿಸಲಾಗಿದೆ. ಫೆಬ್ರವರಿ 15ರಂದು ದರ್ಶನ್ ಕುಟುಂಬದ ಹೆಸರಿನಲ್ಲಿ ರುದ್ರಾಭಿಷೇಕ ನಡೆಯಲಿದ್ದು, ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಅವಲಕ್ಕಿ ಪ್ರಸಾದ ವಿತರಣೆ ಮಾಡುವ ಯೋಜನೆ ರೂಪಿಸಲಾಗಿದೆ. ಹುಟ್ಟುಹಬ್ಬದ ದಿನವಾದ ಫೆಬ್ರವರಿ 16ರಂದು ವಿಶೇಷ ಪೂಜೆ ಜೊತೆಗೆ ಸುಮಾರು 10 ಸಾವಿರ ಮಂದಿಗೆ ಅನ್ನದಾನ ಮಾಡಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಇದಕ್ಕೆ ಸಮಕಾಲೀನವಾಗಿ, ದರ್ಶನ್ ಅಭಿನಯದ ‘ಕರಿಯ’ ಸಿನಿಮಾ ಅವರ ಬರ್ತ್‌ಡೇ ಅಂಗವಾಗಿ ಮರುಬಿಡುಗಡೆಯಾಗಿದೆ. ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ ಮಾಡಲು ಸಜ್ಜಾಗಿದ್ದಾರೆ. ಒಂದು ಕಡೆ ಧಾರ್ಮಿಕ ಪ್ರಾರ್ಥನೆಗಳು, ಇನ್ನೊಂದು ಕಡೆ ಜಾಮೀನು ಸಾಧ್ಯತೆ ಕುರಿತ ಕಾನೂನು ಚರ್ಚೆಗಳು—ಇವೆರಡರ ನಡುವೆ ದರ್ಶನ್ ಬಿಡುಗಡೆ ಕುರಿತ ನಿರೀಕ್ಷೆ ಹೆಚ್ಚಾಗಿದೆ.
ಕಾನೂನು ತಜ್ಞರ ಅಭಿಪ್ರಾಯದಂತೆ, ಸಾಕ್ಷಿಗಳ ಹೇಳಿಕೆಗಳು ನ್ಯಾಯಾಲಯದ ಮುಂದೆ ದಾಖಲಾಗಿದ ನಂತರ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿದೆ. ಹೊರಬಂದು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಡಿಮೆ ಎನ್ನುವ ಆಧಾರದಲ್ಲಿ ನ್ಯಾಯಾಲಯದ ಪರಿಗಣನೆ ಸಿಗಬಹುದು. ಹೀಗಾಗಿ ಹುಟ್ಟುಹಬ್ಬದ ಸಂಭ್ರಮದ ನಡುವೆ ದರ್ಶನ್‌ಗೆ ಜಾಮೀನು ಸಿಗುತ್ತದೆಯೇ ಎಂಬುದು ಈಗ ಅಭಿಮಾನಿಗಳ ಕಾತರದ ಪ್ರಶ್ನೆಯಾಗಿದೆ.










