ಬೆಂಗಳೂರು,ಫೆಬ್ರವರಿ,23,2026 (www.kannadapost.com): ಮದುವೆ ಹೆಸರಿನಲ್ಲಿ ಕ್ರಿಪ್ಟೋ ಹೂಡಿಕೆ ಮಾಡಿಸಿ ಯುವತಿಯೊಬ್ಬಳು ಯುವಕನಿಂದ ₹21.22 ಲಕ್ಷ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದಾಸರಹಳ್ಳಿ ನಿವಾಸಿ ರಾಕೇಶ್ ಎಂಬ ಯುವಕ ವಂಚನೆಗೊಳಗಾಗಿದ್ದು, ಸಿರೀಶಾ ಎಂಬ ಯುವತಿ ಆರೋಪಿಯಾಗಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ಪರಿಚಯ, ನಂತರ ವಂಚನೆ
ರಾಕೇಶ್ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ವಧುವನ್ನು ಹುಡುಕುತ್ತಿದ್ದ ವೇಳೆ ಸಿರೀಶಾ ಪರಿಚಯವಾಗಿದ್ದಳು. ಪರಿಚಯವು ಸ್ನೇಹಕ್ಕೆ ತಿರುಗಿ, ನಂತರ ಮದುವೆಯಾಗೋಣ ಎಂಬ ನಂಬಿಕೆ ಮೂಡಿಸಿದ್ದಾಳೆ.
ಇದಾದ ಬಳಿಕ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ಹೇಳಿ ವೆಬ್ಸೈಟ್ ಲಿಂಕ್ ಹಾಗೂ ಬ್ಯಾಂಕ್ ಖಾತೆ ವಿವರ ನೀಡಿ ಹಣ ವರ್ಗಾಯಿಸಲು ಸೂಚಿಸಿದ್ದಾಳೆ.
ಲಾಭದ ಆಮಿಷ, ನಂತರ ಕಮಿಷನ್ ಬೇಡಿಕೆ
ಮೊದಲಿಗೆ ಲಾಭ ತೋರಿಸಿ ವಿಶ್ವಾಸ ಗಳಿಸಿದ ಬಳಿಕ, ಹಣ ಡ್ರಾ ಮಾಡಲು ಕಮಿಷನ್ ನೀಡಬೇಕು ಎಂದು ಹಂತ ಹಂತವಾಗಿ ₹21.22 ಲಕ್ಷ ಹಣ ಹಾಕಿಸಿಕೊಂಡಿದ್ದಾಳೆ. ಆದರೆ ಲಾಭವನ್ನೂ ನೀಡದೇ, ಮೂಲಧನವನ್ನೂ ಹಿಂತಿರುಗಿಸದೇ ವಂಚನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಪೊಲೀಸ್ ದೂರು
ಈ ಸಂಬಂಧ ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಗೆ ರಾಕೇಶ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.










