ಬೆಂಗಳೂರು: ಕನ್ನಡದ ಸೂಪರ್ ಹಿಟ್ ಸಿನಿಮಾ ಮಿಲನ ಮೂಲಕ ಪುನೀತ್ ರಾಜ್ಕುಮಾರ್ ಜೊತೆ ಸಿನಿಪ್ರೇಕ್ಷಕರ ಮನಗೆದ್ದ ನಟಿ ಪಾರ್ವತಿ ತಿರುವೋತ್ ಇದೀಗ ತಾಯಿತನ, ಗರ್ಭಧಾರಣೆ ಕುರಿತ ತಮ್ಮ ಸ್ಪಷ್ಟ ನಿಲುವಿನಿಂದ ಮತ್ತೆ ಸುದ್ದಿಯಾಗಿದ್ದಾರೆ. ಮಕ್ಕಳು ಮಾಡಿಕೊಳ್ಳುವ ಪ್ರಕ್ರಿಯೆಗೆ ದೇಹವನ್ನು ಒಳಪಡಿಸಲು ಆಸಕ್ತಿ ಇಲ್ಲ ಎಂದು ಪಾರ್ವತಿ ಹೇಳಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಗರ್ಭಿಣಿಯಾಗಲ್ಲ, ಆದರೆ ತಾಯಿಯಾಗುತ್ತೇನೆ
ನಟಿ ಪಾರ್ವತಿ ತಿರುವೋತ್ ಗರ್ಭಧಾರಣೆ ಮೂಲಕ ತಾಯಿಯಾಗುವ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾಲ್ಯದಲ್ಲಿ ತಾಯಿಯಾಗಬೇಕೆಂಬ ಬಲವಾದ ಆಸೆ ಇತ್ತು. ಮಗುವಿಗೆ ಇಡುವ ಹೆಸರನ್ನೂ ಆಗಲೇ ಯೋಚಿಸಿದ್ದೆ ಎಂದು ಹೇಳಿದ್ದಾರೆ. ಆದರೆ ಈಗ ಗರ್ಭಿಣಿಯಾಗಲು ನನಗೆ ಆಸಕ್ತಿ ಇಲ್ಲ. ಒಮ್ಮೆ ನಾನು ತಾಯಿಯಾಗಲೆಂದೇ ಹುಟ್ಟಿದ್ದೇನೆ ಎಂದು ಅನಿಸಿತ್ತು. ಅದೃಷ್ಟವಶಾತ್ ಆ ಆಲೋಚನೆಯಿಂದ ಹೊರಬರಲು ಸಾಧ್ಯವಾಯಿತು ಎಂದು ಪಾರ್ವತಿ ಹೇಳಿದ್ದಾರೆ.
ದತ್ತು ಪಡೆಯುವ ಆಸೆ ಬಹಿರಂಗ
ಮಗುವನ್ನು ದತ್ತು ಪಡೆಯುವ ಆಸೆಯನ್ನು ಪಾರ್ವತಿ ಬಹಿರಂಗಪಡಿಸಿದ್ದಾರೆ. ಏಳು ವರ್ಷದವಳಿದ್ದಾಗಲೇ ದತ್ತು ಪಡೆಯಬೇಕು ಎಂದು ನಿರ್ಧರಿಸಿದ್ದೆ. ನನ್ನ ಮಗುವಿಗೆ ಇಟ್ಟಿದ್ದ ಹೆಸರನ್ನು ನಾನು ಟ್ಯಾಟೂ ಆಗಿಯೂ ಹಾಕಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಸುಶ್ಮಿತಾ ಸೇನ್ ನನ್ನ ರೋಲ್ ಮಾಡೆಲ್
ಬಾಲಿವುಡ್ ನಟಿ ಸುಶ್ಮಿತಾ ಸೇನ್ ನನ್ನ ರೋಲ್ ಮಾಡೆಲ್ ಎಂದು ಪಾರ್ವತಿ ಹೇಳಿದ್ದಾರೆ. ಅವರ ಸಂದರ್ಶನ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಅಪ್ಪ-ಅಮ್ಮ ಆಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಟ್ಯಾಟೂ ನೋಡಿದ ಬಳಿಕ ನನ್ನ ನಿರ್ಧಾರ ಎಷ್ಟು ಗಂಭೀರ ಎಂಬುದು ಅವರಿಗೆ ಅರ್ಥವಾಗಿದೆ ಎಂದು ಪಾರ್ವತಿ ತಿಳಿಸಿದ್ದಾರೆ. ಹೌಟರ್ಫ್ಲೈಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಹಂಚಿಕೊಂಡಿದ್ದಾರೆ.
ದೇಹವನ್ನು ಆ ಪ್ರಕ್ರಿಯೆಗೆ ಒಳಪಡಿಸಲ್ಲ
ಒಂದು ವೇಳೆ ನಾನು ತಾಯಿಯಾಗಲು ಸಿದ್ಧಳಾಗಬಹುದು. ಆದರೆ ಸದ್ಯಕ್ಕೆ ಮಗುವಿಗೆ ಜನ್ಮ ನೀಡುವ ವ್ಯಕ್ತಿಯಾಗಿ ನನ್ನನ್ನು ನಾನು ನೋಡಿಕೊಳ್ಳುತ್ತಿಲ್ಲ. ನಾನು ಅಂಡಾಣು ಫ್ರೀಜ್ ಮಾಡಿಲ್ಲ. ನನ್ನ ದೇಹವನ್ನು ಆ ಪ್ರಕ್ರಿಯೆಗೆ ಒಳಪಡಿಸಲು ನಾನು ಬಯಸುವುದಿಲ್ಲ. ಎಲ್ಲರಿಗೂ ಅವರದೇ ಆದ ಆಯ್ಕೆಗಳಿವೆ. ನನ್ನ ನಿರ್ಧಾರಗಳು ಸಮಯಕ್ಕೆ ತಕ್ಕಂತೆ ಬದಲಾಗಿವೆ ಎಂದು ಪಾರ್ವತಿ ಹೇಳಿದ್ದಾರೆ.
ನಾಯಿಯಿಂದ ಕಲಿತ ತಾಯಿತನ
ತಾಯಿಯಾಗಲೇಬೇಕು ಎಂಬ ಆಲೋಚನೆಯಿಂದ ಹೊರಬರಲು ಸಾಧ್ಯವಾದದ್ದಕ್ಕೆ ದೇವರಿಗೆ ಧನ್ಯವಾದ ಎಂದಿರುವ ಪಾರ್ವತಿ, ಈಗ ಆ ರೀತಿಯ ಆಲೋಚನೆಯ ಸಣ್ಣ ಅಂಶವೂ ನನ್ನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಆದರೆ ಮಗು ನೋಡಿಕೊಳ್ಳುವ, ಪ್ರೀತಿಸುವ ಮನಸ್ಸು ಇದೆ. ಅದನ್ನು ನಾನು ನನ್ನ ನಾಯಿಯಿಂದ ಕಲಿತಿದ್ದೇನೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಸಂಗಾತಿಯ ಅಂಶವೂ ಮುಖ್ಯ
ಭವಿಷ್ಯದಲ್ಲಿ ಮಗು ಬೇಕು ಎನ್ನುವ ಭಾವನೆ ಬಂದರೆ, ಅದರಲ್ಲಿ ನನ್ನ ಸಂಗಾತಿಯ ಒಪ್ಪಿಗೆಯೂ ಪ್ರಮುಖವಾಗಿರಬೇಕು. ಇಂದಿನ ಪರಿಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡುವುದು ಅಂದರೆ ಅವರನ್ನು ಬೆಂಕಿಗೆ ತಳ್ಳಿದಂತೆ. ಅದಕ್ಕಾಗಿಯೇ ಹೆಚ್ಚು ಮಕ್ಕಳನ್ನು ಪಡೆಯಲು ನಾನು ಬಯಸುವುದಿಲ್ಲ ಎಂದು ಪಾರ್ವತಿ ತಿರುವೋತ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.










