ಬೆಂಗಳೂರು : ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು (Ugram Manju) ಅವರು ಹೊಸ ಜೀವನದ ಆರಂಭಕ್ಕೆ ಸಜ್ಜಾಗಿದ್ದಾರೆ. ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಹಾಗೂ ಸೀಸನ್ 12ರಲ್ಲಿ ರೆಬೆಲ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ಉಗ್ರಂ ಮಂಜು, ಟ್ರಾನ್ಸ್ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಾಯಿ ಸಂಧ್ಯಾ (Sandhya) ಅವರೊಂದಿಗೆ ಜನವರಿ 23, 2026ರಂದು ವಿವಾಹವಾಗಲಿದ್ದಾರೆ.
ಈ ಜೋಡಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸಾನಿಧ್ಯದಲ್ಲಿ ಸಪ್ತಪದಿ ತುಳಿಯಲಿದ್ದು, ಮದುವೆ ಸಂಪೂರ್ಣವಾಗಿ ಸಂಪ್ರದಾಯಬದ್ಧ ಹಾಗೂ ಸರಳವಾಗಿ ನಡೆಯಲಿದೆ. ವಿಶೇಷವೆಂದರೆ, ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಮತ್ತು ವಿಜಯಲಕ್ಷ್ಮೀ ಕೂಡ ಇದೇ ಧರ್ಮಸ್ಥಳದಲ್ಲಿಯೇ ವಿವಾಹವಾಗಿದ್ದರು ಎಂಬ ಸಂಗತಿ ಮತ್ತೆ ನೆನಪಿಗೆ ಬರುತ್ತಿದೆ.
ಮದುವೆಗೆ ಮುನ್ನ ಉಗ್ರಂ ಮಂಜು ಅವರ ನಿವಾಸದಲ್ಲಿ ಹಳದಿ ಶಾಸ್ತ್ರ (ಅರಿಶಿಣ ಶಾಸ್ತ್ರ) ಅತ್ಯಂತ ಸರಳವಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಆಪ್ತ ಬಂಧುಗಳು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಿದ್ದರು.
ಅರಿಶಿಣ ಹಚ್ಚಿಕೊಂಡು ಮಧುಮಗನ ವೇಷದಲ್ಲಿ ಉಗ್ರಂ ಮಂಜು ಕಂಗೊಳಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ. ಸಂಪ್ರದಾಯ ಮತ್ತು ಸರಳತೆಗೆ ಆದ್ಯತೆ ನೀಡಿರುವ ಮಂಜು ಅವರ ವಿವಾಹ ಶೈಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಸಾಯಿ ಸಂಧ್ಯಾ ಅವರು ವೃತ್ತಿಯಲ್ಲಿ ಟ್ರಾನ್ಸ್ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಈ ಜೋಡಿಯ ನಿಶ್ಚಿತಾರ್ಥ ನಡೆದು ಸುದ್ದಿಯಾಗಿತ್ತು. ಬಿಗ್ ಬಾಸ್ ಮನೆಯೊಳಗಿದ್ದಾಗಲೇ ಉಗ್ರಂ ಮಂಜು ಅವರ ಮದುವೆ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆಗ ಅವರ ಸ್ನೇಹಿತರು ಮನೆಗೆ ಆಗಮಿಸಿ ಅಲ್ಲಿಯೇ ಗ್ರ್ಯಾಂಡ್ ಆಗಿ ಬ್ಯಾಚುಲರ್ ಪಾರ್ಟಿ ಆಯೋಜಿಸಿದ್ದು ಕೂಡ ಸುದ್ದಿಯಾಯಿತು.
ಇದೇ ಸಂದರ್ಭದಲ್ಲಿ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಮದುವೆ ವಿಚಾರವಾಗಿ ಹಾಸ್ಯ ಮಾಡಿದ್ದರಿಂದ ಉಗ್ರಂ ಮಂಜುಗೆ ಭಾರೀ ಸಿಟ್ಟು ತರಿಸಿತ್ತು. ಆ ಘಟನೆಯ ವಿಡಿಯೋಗಳು ಮತ್ತು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ನಂತರ ಈ ವಿಷಯಕ್ಕೆ ಸಂಬಂಧಿಸಿ ಭಾವಿ ಪತ್ನಿ ಸಂಧ್ಯಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಇದಾದ ಬಳಿಕ ಗಿಲ್ಲಿ ನಟ ಈ ಜೋಡಿಯ ಮದುವೆ ಅಥವಾ ಆರತಕ್ಷತೆಗೆ ಹಾಜರಾಗುವರೇ ಎಂಬ ಪ್ರಶ್ನೆ ಅಭಿಮಾನಿಗಳ ನಡುವೆ ಚರ್ಚೆಯ ವಿಷಯವಾಗಿದೆ.
ಜನವರಿ 23ರಂದು ಧರ್ಮಸ್ಥಳದಲ್ಲಿ ಮದುವೆ ಅತ್ಯಂತ ಸರಳವಾಗಿ ನೆರವೇರಲಿದ್ದು, ಕೇವಲ ಆಪ್ತರು ಮಾತ್ರ ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಮದುವೆಯ ಬಳಿಕ ಬೆಂಗಳೂರಿನಲ್ಲಿ ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಆತ್ಮೀಯರಿಗಾಗಿ ಅದ್ಧೂರಿಯಾಗಿ ರಿಸೆಪ್ಶನ್ ಆಯೋಜಿಸಲಾಗುತ್ತದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಉಗ್ರಂ ಮಂಜು ಅವರ ಮದುವೆ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಡಿದ್ದು, ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ.










