ಕ್ಯಾನ್ಸರ್ ಚಿಕಿತ್ಸಾ ವೆಚ್ಚ ತಗ್ಗಿಸಲು ಸುಂಕ ವಿನಾಯಿತಿ ಅಗತ್ಯ: ನಿರ್ಮಲಾ ಸೀತಾರಾಮನ್ ಗೆ ಮನವಿ ಸಲ್ಲಿಸಿದ ಸಂಸದ ಡಾ.ಸಿ.ಎನ್. ಮಂಜುನಾಥ್

Bangalore Rural MP Dr. C.N. Manjunath met Union Finance Minister Nirmala Sitharaman and requested her to take necessary steps to reduce the cost of cancer treatment.

ನವದೆಹಲಿ : ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಕ್ಯಾನ್ಸರ್ ಚಿಕಿತ್ಸಾ ವೆಚ್ಚ ಕಡಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಕಿಮೋಥೆರಪಿಯ ಜೊತೆಗೆ ಇಮ್ಯೂನೋಥೆರಪಿ ಹಾಗೂ ರೇಡಿಯೋಥೆರಪಿ ಚಿಕಿತ್ಸೆಯ ಅಗತ್ಯ ಹೆಚ್ಚುತ್ತಿದೆ. ಪ್ರಸ್ತುತ ಇಮ್ಯೂನೋಥೆರಪಿ ಚಿಕಿತ್ಸೆಗೆ ಪ್ರತಿ ರೋಗಿಗೆ ಸುಮಾರು 20ರಿಂದ 50 ಲಕ್ಷ ರೂಪಾಯಿ ವೆಚ್ಚವಾಗುತ್ತಿದ್ದು, ಸಾಮಾನ್ಯ ಕುಟುಂಬಗಳಿಗೆ ಇದು ಅಸಾಧ್ಯವಾಗಿದೆ.

ಈ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಇಮ್ಯೂನೋಥೆರಪಿ ಔಷಧಗಳು ಮತ್ತು ರೇಡಿಯೋಥೆರಪಿ ಉಪಕರಣಗಳ ಮೇಲೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡುವಂತೆ ಡಾ. ಮಂಜುನಾಥ್ ಅವರು ಸಚಿವರಿಗೆ ಮನವಿ ಸಲ್ಲಿಸಿದರು.

“ಸುಂಕ ವಿನಾಯಿತಿಯಿಂದ ಕ್ಯಾನ್ಸರ್ ಚಿಕಿತ್ಸಾ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದ್ದು, ಲಕ್ಷಾಂತರ ಬಡ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯಲು ಸಹಕಾರಿ ಆಗಲಿದೆ” ಎಂದು ಸಂಸದರು ತಿಳಿಸಿದ್ದಾರೆ.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿರ್ಮಲಾ ಸೀತಾರಾಮನ್ ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.