Arasikere: ಮಾಡಾಳಿನಲ್ಲಿ ಭಕ್ತಿಭಾವ ಮೂಡಿಸಿದ ಕೋಡಿಮಠದ ಶ್ರೀ ಶಿವಲಿಂಗಜ್ಜಯ್ಯನವರ ಪುಣ್ಯ ಪ್ರವಚನ

Arasikere|ಅರಸೀಕೆರೆ: ಸೂರ್ಯಾಸ್ತದ ನಂತರದ ಚಂದಮಾಮನ ಬೆಳಕು,‌ ಹಗಲಿನ ಬಿಸಿಲ ಝಳ ಮರೆಸುವ ತಂಪಾದ ಗಾಳಿಯ ಆಹ್ಲಾದಕರ ವಾತಾವರಣದಲ್ಲಿ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಕೋಡಿಮಠದ ಮಹಾ ತಪಸ್ವಿ ಶ್ರೀ ಶಿವಲಿಂಗಜ್ಜಯ್ಯ ಅವರ ಪುಣ್ಯ ಸಂಸ್ಮರಣೆ ಅಂಗವಾಗಿ ಆಯೋಜಿಸಿರುವ ಪ್ರವಚನ ಕಾರ್ಯಕ್ರಮವು ಭಕ್ತರ ಮನಸ್ಸಿಗೆ ಉಲ್ಲಾಸ ಹಾಗೂ ಭಕ್ತಿಭಾವವನ್ನು ಮೂಡಿಸುತ್ತಿದೆ.

​ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸುವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ, ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನ ಹಾಗೂ ಅಪ್ಪಣೆ ಮೇರೆಗೆ ಈ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

​ಕೋಡಿಮಠದ ನಿರ್ವಿಕಲ್ಪ ಸಮಾಧಿಯಲ್ಲಿರುವ ಪವಾಡ ಪುರುಷ ಶ್ರೀ ಶಿವಲಿಂಗಜ್ಜಯ್ಯನವರ 139ನೇ ವರ್ಷದ ಸ್ಮರಣಾರ್ಥವಾಗಿ, ಶುಕ್ರವಾರದಿಂದ ಪ್ರತಿದಿನ ಸಂಜೆ ಖ್ಯಾತ ಪ್ರವಚನಕಾರರಾದ ‘ಕರ್ನಾಟಕ ಕಲಾಶ್ರೀ’ ಕಲ್ಲಿನಾಥ ಶಾಸ್ತ್ರಿಗಳು ಶಿವಲಿಂಗಜ್ಜಯ್ಯನವರ ಸಂದೇಶಗಳನ್ನು ಪ್ರವಚನದ ಮೂಲಕ ಭಕ್ತರಿಗೆ ಉಣಬಡಿಸುತ್ತಿದ್ದಾರೆ.

ಆಧ್ಯಾತ್ಮಿಕತೆಯೇ ಬದುಕಿಗೆ ಆಶಾಕಿರಣ

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು, “ನಮ್ಮ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಹಾಗೂ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ. ಮನುಷ್ಯನ ಆತ್ಮಬಲ ಬೆಳೆಯಲು ಆಧ್ಯಾತ್ಮದ ಹಸಿವು ಅಗತ್ಯ. ಆಧ್ಯಾತ್ಮಿಕತೆಯೇ ಬದುಕಿಗೆ ಆಶಾಕಿರಣವಾಗಿದ್ದು, ಆತ್ಮಸಂಯಮವೇ ಇದರ ಅಡಿಪಾಯವಾಗಿದೆ” ಎಂದು ಮಾರ್ಮಿಕವಾಗಿ ನುಡಿದರು.

​ಕಾರ್ಯಕ್ರಮದಲ್ಲಿ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್, ಗೌರವಾಧ್ಯಕ್ಷ ಎಸ್. ಮಲ್ಲಿಕಾರ್ಜುನಪ್ಪ, ಮುಖಂಡ ಎಂ.ಡಿ. ಸೋಮಶೇಖರ್, ಕೋಡಿಮಠದ ಪ್ರತಿನಿಧಿ ಎಚ್.ಸಿ. ಮಹದೇವಪ್ಪ ಸೇರಿದಂತೆ ಅಪಾರ ಸಂಖ್ಯೆಯ ಭಕ್ತ ಸಮೂಹ ಉಪಸ್ಥಿತರಿದ್ದು, ಪ್ರವಚನ ಆಲಿಸಿದರು.