ಹಾಸನ: ಅನನ್ಯ ಟ್ರಸ್ಟ್ ವತಿಯಿಂದ ಇಲ್ಲಿನ ಹೇಮಾವತಿ ನಗರದಲ್ಲಿರುವ ರಚನಾ ನಿಲಯದಲ್ಲಿ ಸ್ವಾತಂತ್ರ‍್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ ಹಾಗು ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ರಂಗಲಕ್ಷ್ಮಿ ಅವರು ಮಾತನಾಡಿ, ನುಗ್ಗೆಹಳ್ಳಿ ಹೋಬಳಿ ಸಂತೇಶಿವರ ಗ್ರಾಮದ ಭೈರಪ್ಪನವರು ತಮ್ಮ ಬರಹಗಳ ಮೂಲಕ ಜಿಲ್ಲೆಯ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಹೆಚ್ಚಿಸಿದ್ದಾರೆ. ಉಪನ್ಯಾಸಕರಾಗಿ ಬದುಕು ಕಟ್ಟಿಕೊಂಡಿದ್ದ ಅವರು ಗುಜರಾತ್, ದೆಹಲಿ, ಮೈಸೂರಿನಲ್ಲಿ ಕೆಲಸ ಮಾಡಿದ್ದರೂ ಹುಟ್ಟೂರಿನ ಬಗ್ಗೆ ಅತೀವ ಪ್ರೀತಿ ಹೊಂದಿದ್ದರು ಎಂಬುದನ್ನು ಗೃಹಭಂಗ ಕಾದಂಬರಿ ಹಾಗೂ ಆತ್ಮಕಥೆ ಭಿತ್ತಿ ಅದನ್ನು ಸಾಕ್ಷೀಕರಿಸುತ್ತದೆ. ಓದುಗರನ್ನು ತಮ್ಮೆಡೆಗೆ ಸೆಳೆಯುವ ಕಲೆ ಅವರಿಗೆ ಕರಗತವಾಗಿತ್ತು. ಆದ್ದರಿಂದಲೇ ಕಾದಂಬರಿಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದ್ದವು. ಕನ್ನಡದಲ್ಲಿ ಮತ್ತೊಬ್ಬ ಅಂತಹ ಲೇಖಕರನ್ನು ನಾವು ಕಾಣಲು ಸಾಧ್ಯವಿಲ್ಲವೆಂದರು.
ಅನನ್ಯ ಟ್ರಸ್ಟ್ ಅಧ್ಯಕ್ಷೆ ಕೆ.ಟಿ. ಜಯಶ್ರೀ ಅವರು ಮಾತನಾಡಿ, ಸ್ವಾತಂತ್ರ‍್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ ಹಾಗು ಸಾಹಿತಿ ಎಸ್.ಎಲ್. ಭೈರಪ್ಪ ಅವರ ಅಗಲಿಕೆಗೆ ತುಂಬಲಾರದ ನಷ್ಟವುಂಟು ಮಾಡಿದೆ. ಶಿವಣ್ಣ ಅವರು 90ರ ಇಳಿ ವಯಸ್ಸಿನಲ್ಲೂ ಸಕ್ರಿಯರಾಗಿದ್ದರು.ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್, ಗೈಡ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನಗರದಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ತಪ್ಪದೇ ಹಾಜರಾಗುತ್ತಿದ್ದರು. ಯುವಕರಿಗೆ ದೇಶ ಪ್ರೇಮದ ಕುರಿತು ಮಾಡುತ್ತಿದ್ದ ಭಾಷಣ ಪ್ರೇರಣಾದಾಯಕವಾಗಿತ್ತು ಎಂದರು.
ಎಸ್.ಎಲ್. ಭೈರಪ್ಪ ಅವರ ಸಾಹಿತ್ಯ ಕೃಷಿಗೆ ಹೋಲಿಕೆ ಯಾರಿಂದಲೂ ಸಾಧ್ಯವಿಲ್ಲ. ಪ್ರಸ್ತುತ ದಿನಗಳಲ್ಲಿ ಒಂದೆರಡು ಪುಸ್ತಕ ಬರೆದು ತಾವು ದೊಡ್ಡ ಸಾಹಿತಿ ಎಂದು ಕರೆಸಿಕೊಳ್ಳುವ ಪರಿಸ್ಥಿತಿಯಲ್ಲಿ ಭೈರಪ್ಪನವರು ಎಂದಿಗೂ ಪ್ರಚಾರದ ಹಿಂದೆ ಬಿದ್ದವರಲ್ಲ. ಉತ್ಸವ ಮೂರ್ತಿಯಾಗದೆ ಮೂಲ ಮೂರ್ತಿಯಾಗಿ ನಿರಂತರ ಬರವಣಿಗೆಯಲ್ಲಿ ತೊಡಗಿದ್ದರು. ಯಾವುದೇ ಟೀಕೆಗಳಿಗೆ ಕಿವಿಗೊಡದೆ ನೇರ ಬರವಣಿಗೆ ಮೂಲಕ ಅಪಾರ ಓದುಗ ಬಳಗ ಸೃಷ್ಟಿಸಿಕೊಂಡಿದ್ದಾರೆ. ಪ್ರಶಸ್ತಿಗಳ ಹಿಂದೆ ಬೀಳದೆ ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದ ಭೈರಪ್ಪ ಮಾದರಿಯಾಗಿದ್ದಾರೆಂದರು.
ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ॥ ಎ. ಸಾವಿತ್ರಿ, ಲೇಖಕಿ ಸೀತಮ್ಮ ವಿವೇಕ್, ಟ್ರಸ್ಟ್ ಸದಸ್ಯರಾದ ಜಗದಾಂಬ, ಶಶಿಕಲಾ, ಕಾಂಚಾಣ ಮಾಲಾ, ಸುಮನಾ, ಜಯಪ್ರಕಾಶ್ ಮತ್ತಿತರರಿದ್ದರು.










